ಮಂಡ್ಯ: ಆಧುನಿಕ ಯುಗದಲ್ಲಿ ನಾಶ ಹೊಂದಲಿರುವ ಮೊದಲ ನದಿ ಎಂದು ಇತಿಹಾಸದ ಪುಟ ಸೇರುತ್ತಲಿದೆ ಈ ನದಿ. ಸಕ್ಕರೆ ಜಿಲ್ಲೆಯ ಜೀವನದಿ ಕಾವೇರಿ. ಕಾವೇರಿಗೆ ಹಲವು ಉಪನದಿಗಳು ಇವೆ. ಅವುಗಳಲ್ಲಿ ಹೇಮಾವತಿ, ಲೋಕಪಾವನಿ, ಶಿಂಷಾ, ಅರ್ಕಾವತಿ ಹಾಗೂ ಕಬಿನಿ ಸೇರಿದಂತೆ ಹಲವು ನದಿಗಳೂ ಸೇರಿವೆ. ಇವುಗಳಲ್ಲಿ ನಾವು ಹೇಳ ಹೊರಟಿರುವ ನದಿಯೇ ಲೋಕಪಾವನಿ.
ಲೋಕಪಾವನಿ ಮಂಡ್ಯ ಜಿಲ್ಲೆಯಲ್ಲಿಯೇ ಹುಟ್ಟಿ, ಮಂಡ್ಯ ಜಿಲ್ಲೆಯಲ್ಲಿಯೇ ಅಂತ್ಯವಾಗುವ ನದಿ. ನಾಗಮಂಗಲ ತಾಲೂಕಿನ ಅಲಪಹಳ್ಳಿಯ ಹುಚ್ಚುಕೆರೆಯಲ್ಲಿ ಹುಟ್ಟಿ, ಶ್ರೀರಂಗಪಟ್ಟಣದ ನಿಮಿಷಾಂಬ ದೇವಾಲಯದ ಬಳಿ ಕಾವೇರಿಯನ್ನು ಸೇರುವ ಮೂಲಕ ಅಂತ್ಯವಾಗುತ್ತದೆ. ಪ್ರತಿ ವರ್ಷ ಸರಾಸರಿ ಸುಮಾರು 4 TMC ನೀರು ಈ ನದಿಯಿಂದ ಸಿಗುತ್ತಿತ್ತು. ಆದರೆ, ಈಗ ಆಗಿರುವ ಕಥೆಯೇ ಬೇರೆ.
ಕಳೆದ ಒಂದೂವರೆ ದಶಕಗಳಿಂದ ಒಣಗಿ ಹೋಗಿದ್ದಾಳೆ ಲೋಕಪಾವನಿ. ತನ್ನ ಜಲ ರೇಖೆಯನ್ನೇ ಕಳೆದುಕೊಂಡು ನಾಶದ ಅಂಚಿಗೆ ತಲುಪಿದ್ದಾಳೆ. ಸುಮಾರು 153 ಅಡಿ ಅಗಲದ ಲೋಕಪಾವನಿ ಈಗ ಕೇವಲ 30 ರಿಂದ 35 ಅಡಿ ಅಗಲಕ್ಕೆ ಬಂದು ನಿಂತಿದ್ದಾಳೆ. ವಾರ್ಷಿಕ 4 TMC ನೀರು ನೀಡುತ್ತಿದ್ದವಳು ಈಗ 4 ತೊಟ್ಟು ನೀರು ನೀಡಲು ಸಾಧ್ಯವಾಗದೇ ಬತ್ತಿ ಹೋಗಿದ್ದಾಳೆ. ಕೆಲವು ಕಡೆ ಇಲ್ಲಿ ಲೋಕಪಾವನಿ ನದಿ ಇತ್ತಾ ಎಂಬ ಅನುಮಾನಕ್ಕೂ ಕಾರಣಳಾಗಿದ್ದಾಳೆ.
ಅಲಪಹಳ್ಳಿಯ ಹುಚ್ಚು ಕೆರೆಯಿಂದ ಹುಟ್ಟುವ ಲೋಕಪಾವನಿ, ಈಗ ಅಲ್ಲಿಯೇ ಅಂತ್ಯವಾಗಿದ್ದಾಳೆ. ಸ್ಥಳೀಯರು ಹೇಳುವ ಪ್ರಕಾರ, ಒಂದು ದಶಕದಿಂದ ಲೋಕಪಾವನಿ ಹರಿದೇ ಇಲ್ಲ. ಹೀಗಾಗಿ ಲೋಕಪಾವನಿ ನಂಬಿ ಭತ್ತ ಬೆಳೆಯುತ್ತಿದ್ದ ನಾವು, 10 ವರ್ಷದಿಂದ ಭತ್ತವನ್ನೇ ಬೆಳೆದಿಲ್ಲ ಎನ್ನುತ್ತಾರೆ. ಭತ್ತ ಬೆಳೆಯೋದು ಇರಲಿ, ರಾಸುಗಳಿಗೂ ನೀರಿನ ಸಮಸ್ಯೆ ತಲೆದೋರಿದೆ ಎಂಬುದನ್ನು ಹೊರ ಹಾಕಿದ್ದಾರೆ.
ಲೋಕಪಾವನಿ ನದಿ ಹುಟ್ಟುವುದು ಅಲಪಹಳ್ಳಿಯ ಹುಚ್ಚುಕೆರೆಯಲ್ಲಿ. ಈ ಕೆರೆಯ ನೀರಿನ ಮೂಲ ಸಮೀಪದ ಜೇನುಕಲ್ಲು ಮಂಟಿ, ಸಾರಂಗಿ, ಉಯ್ಯನಹಳ್ಳಿ, ಸಂತೆ ಬಾಚಹಳ್ಳಿ ವ್ಯಾಪ್ತಿಯಲ್ಲಿ ಸುರಿಯುವ ಮಳೆಯೇ ಆಧಾರ ಎನ್ನುವುದು ಇಲ್ಲಿನ ವಿಶೇಷ. ಅಲ್ಲಿ ಸುರಿಯುವ ಮಳೆ, ಸುತ್ತಮುತ್ತಲ ಕೆರೆಗಳಿಗೆ ತುಂಬಿ, ಕೋಡಿ ಬಿದ್ದು ಹುಚ್ಚು ಕೆರೆಗೆ ಬಂದು ಸೇರುತ್ತದೆ. ಹುಚ್ಚು ಕೆರೆ ತುಂಬಿ ಕೋಡಿ ಬಿದ್ದರೆ 'ಲೋಕ'ಪಾವನ ಆಯಿತು ಎಂದೇ ಅರ್ಥ. ಅಂದರೆ ಲೋಕಪಾವನಿ ಹರಿದಳು ಎಂದು ಇಲ್ಲಿನ ಜನ ಮಾತಾಡಿಕೊಳ್ಳುತ್ತಾರೆ. ಆದರೆ, ಈ ವ್ಯಾಪ್ತಿಯಲ್ಲಿ ಮಳೆ ಇಲ್ಲದ ಕಾರಣ ಕೆರೆಗಳೂ ತುಂಬಿಲ್ಲ, ನದಿಯೂ ಹರಿಯಲಿಲ್ಲ.
ನದಿಯಲ್ಲಿ ನೀರು ಹರಿಯದ ಕಾರಣ 35 ಕಿಲೋ ಮೀಟರ್ ಉದ್ದದ ಲೋಕಪಾವನಿ ತನ್ನ ಹರಿವಿನ ಹಾದಿಯನ್ನೇ ಕಳೆದುಕೊಳ್ಳುತ್ತಿದ್ದಾಳೆ. ನದಿ ಮೂಲ ಎಲ್ಲಿದೆ ಎಂಬುದನ್ನು ಹುಡುಕಾಡಬೇಕಾದ ಕಾಲ ಸನಿಹದಲ್ಲೇ ಇದೆ.