ಬೆಳಗಾವಿ: ಎರಡನೇ ಡೋಸ್ ಲಸಿಕೆ ವಿಳಂಬವಾದರೆ ಯಾರೂ ಆತಂಕಪಡುವ ಅಗತ್ಯವಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಹೇಳಿದ್ದಾರೆ.
ಬೆಳಗಾವಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲಸಿಕೆ ವಿಳಂಬವಾದರೆ ಆತಂಕಪಡುವ ಅಗತ್ಯವಿಲ್ಲ ಎಂದು ತಜ್ಞರ ಸಮಿತಿ ತಿಳಿಸಿದೆ. ಆದಾಗ್ಯೂ ಎರಡನೇ ಡೋಸ್ ಲಸಿಕೆ ನೀಡಲು ಸರ್ಕಾರ ಕ್ರಮಕೈಗೊಂಡಿದೆ ಎಂದರು.
ನಗರ ಮತ್ತು ಗ್ರಾಮಗಳಲ್ಲಿ ಸ್ಮಶಾನ ಜಾಗೆ ಒದಗಿಸಲು ಜಿಲ್ಲಾಡಳಿತ ತಕ್ಷಣವೇ ಕ್ರಮಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಪ್ರಾಥಮಿಕ ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಲಸಿಕೆ ಅಭಿಯಾನ ಆರಂಭಿಸಲಾಗುತ್ತಿದೆ. ಇದಕ್ಕಾಗಿ ಅಗತ್ಯ ಸಿದ್ಧತೆ ಮಾಡಿಕೊಳ್ಳಲು ಡಿಎಚ್ಓಗೆ ನಿರ್ದೇಶನ ನೀಡಲಾಗಿದೆ. ಜಿಲ್ಲೆಗೆ ವ್ಯಾಕ್ಸಿನ್ ಪೂರೈಕೆ ಹೆಚ್ಚಳವಾಗಿದ್ದು, ಹೆಚ್ಚಿನ ಜನರಿಗೆ ಲಸಿಕೆ ನೀಡಲು ಇದರಿಂದ ಅನುಕೂಲವಾಗಲಿದೆ ಎಂದು ಮಾಹಿತಿ ನೀಡಿದರು.
ಜನಪ್ರತಿನಿಧಿಗಳ ಸಭೆಯಲ್ಲಿ ಆಕ್ಸಿಜನ್, ರೆಮ್ಡೆಸಿವಿರ್, ಬೆಡ್, ಆ್ಯಂಬುಲೆನ್ಸ್ ಮತ್ತಿತರ ಸಮಸ್ಯೆಗಳನ್ನು ಚರ್ಚಿಸಲಾಗಿದೆ. ಅವರ ಸಲಹೆ ಸೂಚನೆ ಮೇರೆಗೆ ತಕ್ಷಣವೇ ಕ್ರಮವಹಿಸಲಾಗುತ್ತಿದೆ. ಅಥಣಿ ಸೇರಿದಂತೆ ಕೆಲ ತಾಲೂಕು ಕೇಂದ್ರಗಳಲ್ಲಿ ಹೆಚ್ಚಿನ ಬೆಡ್ ವ್ಯವಸ್ಥೆಯನ್ನು ಕಲ್ಪಿಸಬೇಕು ಎಂಬ ಬೇಡಿಕೆ ಬಂದಿದೆ. ಅದರ ಬಗ್ಗೆಯೂ ಪರಿಶೀಲಿಸಲಾಗುತ್ತಿದೆ. ಆಕ್ಸಿಜನ್ ಸಮರ್ಪಕ ಬಳಕೆಗೆ ಅನುಕೂಲವಾಗುವಂತೆ ವೈದ್ಯರಿಗೆ ಆನ್ಲೈನ್ ತರಬೇತಿ ನೀಡುವ ಯೋಜನೆ ಇದೆ. ಮೆಡಿಸಿನ್ ಕಿಟ್ ಗಳನ್ನು ಮನೆ ಮನೆಗೆ ತಲುಪಿಸಲು ಕ್ರಮ ವಹಿಸಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದೇನೆ. ರೆಮ್ಡೆಸಿವಿರ್ಗೆ ಹೆಚ್ಚಿನ ದರ ಪಡೆಯುತ್ತಿರುವ ದೂರುಗಳು ಬಂದಾಗ ಹಾಗೂ ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದರೆ ಕ್ರಮ ಜರುಗಿಸಲಾಗುವುದು ಎಂದರು.