ರಾಯಚೂರು: ಈಚೆಗೆ ನಗರದ ಉಪ ನೋಂದಣಿ ಕಚೇರಿಯಲ್ಲಿ ನೆಟ್‌ವರ್ಕ್ ಸಮಸ್ಯೆ ಉಂಟಾಗಿ, ನೋಂದಣಿ ಸಂಬಂಧಿತ ಕೆಲಸಗಳನ್ನು ಸ್ಥಗಿತಗೊಳಿಸಿದ್ದರಿಂದ ಆಕ್ರೋಶಗೊಂಡ ಸಾರ್ವಜನಿಕರು, ರೈತರು ಕೂಡಲೇ ಸರಿಪಡಿಸುವಂತೆ ಒತ್ತಾಯಿಸಿದರು.
ಆಸ್ತಿ ಸೇರಿದಂತೆ ಇನ್ನಿತರ ನೋಂದಣಿಗಳು ಶೀಘ್ರದಲ್ಲೇ ಆಗಬೇಕಿರುತ್ತವೆ. ಕೆಲವು ಕಾನೂನು ಚೌಕಟ್ಟಿನ ವಹಿವಾಟುಗಳು ವಿಳಂಬವಾಗದಂತೆ ಒಪ್ಪಿಸಬೇಕಿರುವುದರಿಂದ ನೋಂದಣಿ ಅಧಿಕಾರಿಗಳು ನೆಟ್‌ವರ್ಕ್ ಸಮಸ್ಯೆಗೆ ಪರ್ಯಾಯ ದಾರಿ ಮಾಡಬೇಕು. ಇಲ್ಲವಾದರೆ ಅನೇಕ ಸಮಸ್ಯೆಗಳು ಎದುರಾಗುತ್ತವೆ. ನೋಂದಣಿಗಾಗಿ ದೂರದ ಊರುಗಳಿಂದ ಬರುವವರಿಗೆ ನಿತ್ಯ ಹಣ ವ್ಯಯಿಸುವಂತಾಗಿದೆ ಎಂದು ಅಧಿಕಾರಿಗಳ ವಿರುದ್ಧ ಹಿಡಿಶಾಪ ಹಾಕಿದರು. ಕಚೇರಿಯಲ್ಲಿ ಕೆಲವು ಕಾಲ ಗೊಂದಲದ ವಾತಾವರಣ ಉಂಟಾಯಿತು. ಸ್ಥಳಕ್ಕೆ ಆಗಮಿಸಿ ಪೊಲೀಸರು ಪರಿಸ್ಥಿತಿಯನ್ನು ತಿಳಿಗೊಳಿಸಿದರು.