ಭುವನೇಶ್ವರ: ಲೋಕಸಭಾ ಚುನಾವಣೆ ಜತೆಗೆ ಒಡಿಶಾದಲ್ಲಿ ನಡೆದಿದ್ದ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ದಾಖಲು ಮಾಡಿರುವ ನವೀನ್ ಪಟ್ನಾಯಕ್ ಇಂದು ಸತತ ಐದನೇ ಬಾರಿಗೆ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದರು.
ಪಶ್ಚಿಮ ಬಂಗಾಳದ ಜ್ಯೋತಿ ಬಸು ಹಾಗೂ ಸಿಕ್ಕಿಂನ ಪವನ್ ಚಾಮ್ಲಿಂಗ್ ಹೊರತುಪಡಿಸಿ, ನವೀನ್ ಪಟ್ನಾಯಕ್ ಐದನೇ ಬಾರಿಗೆ ಸಿಎಂ ಆಗಿ ಸುಧೀರ್ಘ ಕಾಲಾವಧಿಗೆ ಸಿಎಂ ಆಗಿರುವ ಹಿರಿಮೆಗೆ ಪಾತ್ರರಾಗಿದ್ದಾರೆ.
ಈ ಬಾರಿ ನಡೆದ ವಿಧಾನಸಭೆ ಚುನಾವಣೆಯಲ್ಲಿ 147 ವಿಧಾನಸಭಾ ಕ್ಷೇತ್ರಗಳ ಪೈಕಿ ನವೀನ್ ಪಟ್ನಾಯಕ್ ನೇತೃತ್ವದ ಬಿಜೆಡಿ 112 ಸ್ಥಾನ ಕೈವಶ ಮಾಡಿಕೊಳ್ಳುವ ಮೂಲಕ ಮತ್ತೊಂದು ಅವಧಿಗೆ ಸರ್ಕಾರ ರಚನೆ ಮಾಡಿದೆ.
ಪಟ್ನಾಯಕ್ ಜತೆ 20 ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದು, ಇದರಲ್ಲಿ 11 ಶಾಸಕರು ಕ್ಯಾಬಿನೆಟ್ ದರ್ಜೆಯ ಸಚಿವ ಸ್ಥಾನ ಹಾಗೂ 9 ಶಾಸಕರು ರಾಜ್ಯ ಖಾತೆ ಸಚಿವರಾಗಿ ಅಧಿಕಾರದ ಗೋಪ್ಯತೆ ಸ್ವೀಕಾರ ಮಾಡಿದ್ದಾರೆ. ವಿಶೇಷವೆಂದರೆ ಪಟ್ನಾಯಕ್ ಜತೆ ಪ್ರಮಾಣ ವಚನ ಸ್ವೀಕರಿಸಿದವರ ಪೈಕಿ 10 ಶಾಸಕರು ಹೊಸದಾಗಿ ಸಂಪುಟ ಸೇರಿದ್ದಾರೆ.
ನವೀನ್ ಪಟ್ನಾಯಕ್ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮಕ್ಕೆ ನರೇಂದ್ರ ಮೋದಿಯವರಿಗೆ ಆಹ್ವಾನ ನೀಡಲಾಗಿತ್ತು. ಆದರೆ ಅವರು ಕಾರ್ಯಕ್ರಮಕ್ಕೆ ಆಗಮಿಸಿಲ್ಲ. ಬದಲಾಗಿ ಟ್ವೀಟರ್ನಲ್ಲಿ ವಿಶ್ ಮಾಡಿದ್ದು, ಜನರ ಆಶೋತ್ತರಗಳನ್ನು ಈಡೇರಿಸುವ ಜತೆಗೆ ಒಡಿಶಾದ ಅಭಿವೃದ್ಧಿಗೆ ಸಿಎಂ ಶ್ರಮಿಸಲಿ ಎಂದು ಬರೆದಿದ್ದಾರೆ.