ನವದೆಹಲಿ: ಲೋಕಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿಯ ಅಜೆಂಡಾಗಳನ್ನು ಜನರ ಮುಂದಿಡುವ ಸಲುವಾಗಿ ತೆರೆಯಲಾಗಿದ್ದ ನಮೋ ಟಿವಿ ಚುನಾವಣೆ ಮುಕ್ತಾಯವಾಗುತ್ತಿದ್ದಂತೆ ಸದ್ದಿಲ್ಲದೆ ಪ್ರಸಾರ ನಿಲ್ಲಿಸಿದೆ.
ಮೇ 19ರಂದು ಕೊನೆಯ ಹಂತದ ಲೋಕಸಭಾ ಚುನಾವಣೆ ನಡೆದಿತ್ತು. ಮತದಾನಕ್ಕೂ ಎರಡು ದಿನ ಮುಂಚಿತವಾಗಿ ಬಹಿರಂಗ ಪ್ರಚಾರಕ್ಕೆ ತೆರೆಬಿದ್ದಿತ್ತು. ಹೀಗಾಗಿ ಮೇ 17ರಂದೇ ನಮೋ ಟಿವಿ ಕೊನೆಯ ಪ್ರಸಾರ ಕಂಡಿದೆ.
"ನಮೋ ಟಿವಿಯನ್ನು ಬಿಜೆಪಿಯ ಪ್ರಚಾರ ಸಾಧನವನ್ನಾಗಿ ಬಳಸಿಕೊಳ್ಳಲಾಗಿತ್ತು. ಲೋಕಸಭಾ ಚುನಾವಣೆಯ ಬಳಿಕ ಇದರ ಅಗತ್ಯವಿಲ್ಲ. ಈ ನಿಟ್ಟಿನಲ್ಲಿ ಮೇ 17ರಂದು ಪ್ರಸಾರ ನಿಲ್ಲಿಸಲಾಗಿದೆ" ಎಂದು ಬಿಜೆಪಿ ನಾಯಕರೋರ್ವರು ತಿಳಿಸಿದ್ದಾರೆ.
ಮಾರ್ಚ್ 31ರಿಂದ ಪ್ರಸಾರ ಆರಂಭಿಸಿದ ನಮೋ ಟಿವಿ ಚುನಾವಣೆ ವೇಳೆ ಸಾಕಷ್ಟು ವಿವಾದಕ್ಕೆ ಗುರಿಯಾಗಿತ್ತು. ನಮೋ ಟಿವಿ ಪ್ರಸಾರ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ, ಹೀಗಾಗಿ ತಕ್ಷಣವೇ ಪ್ರಸಾರ ನಿಲ್ಲಿಸಬೇಕು ಎಂದು ವಿಪಕ್ಷಗಳು ಆಯೋಗದ ಮುಂದೆ ಮನವಿ ಸಲ್ಲಿಸಿದ್ದರು.