ಮೈಸೂರು: ಭಾರತೀಯ ವಿಶ್ವವಿದ್ಯಾನಿಲಯಗಳ ರ‍್ಯಾಂಕಿಂಗ್ ಪಟ್ಟಿ ಬಿಡುಗಡೆಯಾಗಿದ್ದು, ಮೈಸೂರು ವಿಶ್ವವಿದ್ಯಾನಿಲಯ ಭಾರತೀಯ ವಿವಿಗಳ ಪಟ್ಟಿಯಲ್ಲಿ 54ನೇ ರ‍್ಯಾಂಕ್ ಪಡೆಕೊಂಡಿದೆ.
ದೇಶದ 4867 ಉನ್ನತ ಶಿಕ್ಷಣ ಸಂಸ್ಥೆಗಳು ಹಾಗೂ ವಿವಿಗಳು 2019ರ ರ‍್ಯಾಂಕಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದು, ಮೈಸೂರು ವಿವಿ 54 ನೇ ಸ್ಥಾನ ಪಡೆದುಕೊಂಡಿದೆ. ಕರ್ನಾಟಕ ರಾಜ್ಯದ ಸಾರ್ವಜನಿಕ ವಿವಿಗಳ ಪೈಕಿ ಮೊದಲ ಸ್ಥಾನ ಪಡೆದುಕೊಂಡಿದೆ.
ಕೇಂದ್ರ ಸರ್ಕಾರದ ಮಾನವ ಅಭಿವೃದ್ಧಿ ಸಚಿವಾಲಯದ ಆಶ್ರಯದಲ್ಲಿ ಎನ್‌ಐಆರ್‌ಎಫ್( ನ್ಯಾಷನಲ್ ಇನ್‌ಸ್ಟಿಟ್ಯೂಶನಲ್ ರ‍್ಯಾಂಕಿಂಗ್ ಪ್ರೇಮ್‌ವರ್ಕ್) ದೇಶದ ಎಲ್ಲ ಉನ್ನತ ಶಿಕ್ಷಣ ಸಂಸ್ಥೆಗಳ ಸ್ಥಾನಮಾನವನ್ನು ಗುರುತಿಸುವ ಮಾನದಂಡಗಳನ್ನು ರೂಪಿಸಿದೆ. ರ‍್ಯಾಂಕಿಂಗ್ ಪದ್ದತಿಯನ್ನು 2016ರಿಂದ ಜಾರಿಗೆ ತಂದಿದ್ದು, ಪ್ರಸ್ತುತ ಇದು ನಾಲ್ಕನೇ ಬಾರಿಗೆ ನಡೆದ ರ‍್ಯಾಂಕಿಂಗ್ ಸ್ಪರ್ಧೆಯಾಗಿದೆ.
ಕರ್ನಾಟಕದ ವಿಶ್ವವಿದ್ಯಾಲಯಗಳ ಪೈಕಿ ಈ ರ‍್ಯಾಂಕ್ ಪಡೆದಿರುವ ಏಕೈಕ ವಿಶ್ವವಿದ್ಯಾಲಯ ಎಂಬ ಕೀರ್ತಿ ಮೈಸೂರಿನದ್ದಾಗಿದೆ. ದೇಶದ ಎಲ್ಲಾ ವಿವಿ ಗಳ ಪೈಕಿ 54ನೇ ರ‍್ಯಾಂಕ್, ಎಲ್ಲ ಶೈಕ್ಷಣಿಕ ಸಂಸ್ಥೆಗಳ ಪೈಕಿ 80ನೇ ರ‍್ಯಾಂಕ್ ಲಭಿಸಿದೆ. ರಾಜ್ಯದ ವಿವಿ ಗಳ ಪೈಕಿ ಮೈಸೂರು ವಿವಿ ಗೆ 1ನೇ ರ‍್ಯಾಂಕ್ ಸಿಕ್ಕಿದೆ. ದೇಶದ ಒಟ್ಟು 4867 ಸಂಸ್ಥೆಗಳನ್ನು ‘ಎನ್‌ಐಆರ್‌ಎಫ್’ ಅಧ್ಯಯನಕ್ಕೆ ಒಳಪಡಿಸಿತ್ತು. ಬೋಧನೆ, ಕಲಿಕೆ ಹಾಗೂ ಸಂಶೋಧನೆ, ಸಂಶೋಧನೆ ಹಾಗೂ ವೃತ್ತಿಪರತೆ, ಪದವೀಧರರ ಪ್ರಮಾಣ, ಗ್ರಹಿಕೆ ಮಾನದಂಡಗಳನ್ನು ಅಧ್ಯಯನ ಮಾಡಿ ರ‍್ಯಾಂಕ್‌ಗಳನ್ನು ಶಿಕ್ಷಣ ಸಂಸ್ಥೆಗಳಿಗೆ ನೀಡಲಾಗಿದೆ.
ನವದೆಹಲಿಯ ವಿಜ್ಞಾನ ಭವನದಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ರ‍್ಯಾಂಕ್‌ಗಳನ್ನು ಪ್ರಕಟಿಸಲಾಗಿದ್ದು, ಕುಲಪತಿ ಪ್ರೊ.ಜಿ.ಹೇಮಂತಕುಮಾರ್ ಅವರು ಪ್ರಮಾಣಪತ್ರ ಸ್ವೀಕರಿಸಿದ್ದಾರೆ.
2020ರ ವೇಳೆ ಮೈಸೂರು ವಿವಿ ನಾಲ್ಕನೇ ಬಾರಿ ನ್ಯಾಕ್ ಮುರು ಮಾನ್ಯತೆಗೆ ಒಳಪಡಲಿದ್ದು, 2020ರ ಇಂಡಿಯಾ ರ‍್ಯಾಂಕಿಂಗ್‌ನಲ್ಲಿ ಉತ್ತಮ ಸ್ಥಾನ ಪಡೆಯಲು ಈಗಿನಿಂದಲೇ ಯೋಜನೆ ರೂಪಿಸಿ, ರ‍್ಯಾಂಕಿಂಗ್ ಹಾಗೂ ನ್ಯಾಕ್ ಮಾನ್ಯತೆಗಾಗಿಯೇ ಒಂದು ವಿಶೇಷ ತಂಡವನ್ನು ರಚಿಸಲಾಗುವುದು ಜೊತೆಗೆ ಶೈಕ್ಷಣಿಕ ಉನ್ನತಿಗೆ ಎನ್‌ಐಆರ್‌ಎಫ್ ರ‍್ಯಾಂಕ್ ಗರಿಷ್ಠ ಸ್ಥಾವವನ್ನು ಪಡೆಯುವುದಕ್ಕೆ ವಿವಿ ಸಜ್ಜಾಗುತ್ತಿದೆ ಎಂದು ಮೈಸೂರು ವಿವಿ ಪ್ರೊ.ಜಿ.ಹೇಮಂತ್ ಕುಮಾರ್ ಹೇಳಿದ್ದಾರೆ.