ಕೋಲಾರ: ಮೇ 23ರಂದು ನಡೆಯುವ ಲೋಕಸಭಾ ಚುನಾವಣೆಯ ಮತ ಎಣಿಕೆ ಕುರಿತು ಅಧಿಕಾರಿಗಳಿಗೆ ತರಬೇತಿ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು. ನಗರದ ರಂಗಮಂದಿರದಲ್ಲಿ ಚುನಾವಣಾಧಿಕಾರಿ ಜೆ.ಮಂಜುನಾಥ್ ಅಧ್ಯಕ್ಷತೆಯಲ್ಲಿ ಅಧಿಕಾರಿಗಳಿಗೆ ಮತ ಎಣಿಕೆ ಕುರಿತು ಒಂದು ದಿನದ ತರಬೇತಿ ಶಿಬಿರ ಆಯೋಜನೆ ಮಾಡಲಾಗಿತ್ತು.
ಸಭೆಯಲ್ಲಿ ಮತ ಎಣಿಕೆ ಸಂದರ್ಭದಲ್ಲಿ ಅನುಸರಿಸಬೇಕಾದ ಕ್ರಮಗಳ ಕುರಿತು ಸಂಪನ್ಮೂಲ ವ್ಯಕ್ತಿಯಿಂದ ಪ್ರಾತ್ಯಕ್ಷಿಕೆಯನ್ನು ನೀಡಲಾಯಿತು. ವಿವಿ ಪ್ಯಾಟ್ಗಳನ್ನು ತೆಗೆಯುವ ಮುನ್ನ ಸ್ಥಳದಲ್ಲಿರುವ ವೀಕ್ಷಕರಿಗೆ ವಿವಿ ಪ್ಯಾಟ್ಗಳನ್ನು ತೋರಿಸಿ, ನಂತರ ತೆಗೆದು ಮತ ಎಣಿಕೆ ಪ್ರಕ್ರಿಯೆ ಮುಂದುವರೆಸಬೇಕು ಎಂದು ತಿಳಿಸಿದರು.
ಮತ ಎಣಿಕೆ ಸಂದರ್ಭದಲ್ಲಿ ಯಾವುದೇ ಗೊಂದಲಗಳಿಗೆ ಅವಕಾಶ ಮಾಡಿಕೊಡದಂತೆ ಅಧಿಕಾರಿಗಳು ಕೆಲಸ ನಿರ್ವಹಿಸಬೇಕು. ಕೋಲಾರ ಲೋಕಸಭಾ ವ್ಯಾಪ್ತಿಯಲ್ಲಿ 8 ವಿಧಾನಸಭಾ ಕ್ಷೇತ್ರಗಳು ಬರಲಿದ್ದು, ಪ್ರತಿ ಕ್ಷೇತ್ರಕ್ಕೂ ಒಂದು ಕೊಠಡಿಯನ್ನು ಮಾಡಲಾಗಿದೆ ಎಂದು ತಿಳಿಸಿದರು.