ಬೆಳಗಾವಿ: ಕೋವಿಡ್ ಎರಡನೇ ಅಲೆಯಲ್ಲಿ 21 ಸಾವಿರ ಮಾಸ್ಕ್ ನಿಯಮ ಉಲ್ಲಂಘನೆ ಕೇಸ್ ದಾಖಲಾಗಿದ್ದು, 21 ಲಕ್ಷಕ್ಕಿಂತ ಹೆಚ್ಚಿನ ದಂಡ ವಸೂಲಿ ಮಾಡಲಾಗಿದೆ ಎಂದು ಎಸ್ಪಿ ಲಕ್ಷ್ಮಣ ನಿಂಬರಗಿ ಹೇಳಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೋವಿಡ್ ಎರಡನೇ ಅಲೆ ತಡೆಗೆ ಜಿಲ್ಲೆಯಲ್ಲಿ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲಾಗಿದ್ದು, ಲಾಕ್‌ಡೌನ್ ಉಲ್ಲಂಘಿಸಿದವರ ಮೇಲೆ ಕೇಸ್ ದಾಖಲಿಸಿ ಕ್ರಮಕೈಗೊಳ್ಳಲಾಗಿದೆ. ಜಿಲ್ಲೆಯಲ್ಲಿ ಈವರೆಗೆ ಮಾಸ್ಕ್ ಉಲ್ಲಂಘಿಸಿದ 21 ಸಾವಿರ ಜನರ ಮೇಲೆ ಕೇಸ್ ದಾಖಲಿಸಿ, 21 ಲಕ್ಷಕ್ಕೂ ಅಧಿಕ ದಂಡ ವಸೂಲಿ ಮಾಡಲಾಗಿದೆ. ಅದರಂತೆ ಸಾಮಾಜಿಕ ಅಂತರ ಉಲ್ಲಂಘಿಸಿದ 4569 ಕೇಸ್ ದಾಖಲಿಸಿ 4,26,900 ರೂಪಾಯಿ ತಂಡ ವಿಧಿಸಲಾಗಿದೆ. ಇದಲ್ಲದೇ ಅನಗತ್ಯವಾಗಿ ಓಡಾಡುತ್ತಿದ್ದ 5534 ಬೈಕ್ಗಳನ್ನು ಸೀಜ್ ಮಾಡಲಾಗಿದೆ. 228 ಎನ್ಡಿಪಿಎಸ್ ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗಿದೆ. ಕರ್ನಾಟಕ ಅಪಿಡೆಮಿಕ್ ಕಾಯ್ದೆ ಅಡಿಯಲ್ಲಿ 64 ಕೇಸ್ ದಾಖಲಾಗಿದೆ ಎಂದು ತಿಳಿಸಿದರು.
ಜಿಲ್ಲೆಯಾದ್ಯಂತ ಸುಮಾರು 117 ಚೆಕ್ ಪೋಸ್ಟ್ ಕಾರ್ಯಚರಣೆ ಮಾಡುತ್ತಿದೆ. 670 ಕ್ಕಿಂತಲೂ ಹೆಚ್ಚು ಬ್ಯಾರಿಕೇಡ್‌ಗಳನ್ನು ಅಳವಡಿಸಿ ತೀವ್ರ ತಪಾಸಣೆ ಮಾಡಲಾಗುತ್ತಿದೆ. ಇನ್ನು ಕೋವಿಡ್ ಮೊದಲನೆಯ ಅಲೆಯಲ್ಲಿ ಮಾಸ್ಕ್ ನಿಯಮ ಉಲ್ಲಂಘನೆ ಸಂಬಂಧಿಸಿದಂತೆ 23897 ಕೇಸ್ ದಾಖಲಿಸಿ, 23,89,700 ರೂಪಾಯಿ ದಂಡ ವಿಧಿಸಲಾಗಿದೆ. ಸಾಮಾಜಿಕ ಅಂತರ ಉಲ್ಲಂಘನೆ ಮಾಡಿದ್ದಕ್ಕೆ 2776 ಕೇಸ್ ಹಾಕಲಾಗಿದೆ. 2264 ಬೈಕ್, ನಾಲ್ಕು ಚಕ್ರದ 100 ವಾಹನ ಸೀಜ್ ಮಾಡಲಾಗಿದೆ.
ಕೆಲವು ಕಡೆ ಜನರು ಲಾಕ್‌ಡೌನ್ ಸಂದರ್ಭದಲ್ಲೂ ಮೌಢ್ಯದ ಮೊರೆ ಹೋಗುತ್ತಿದ್ದಾರೆ. ಅಂತವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಹೀಗಾಗಿ ಸಾರ್ವಜನಿಕರು ಸರ್ಕಾರದ ಕೋವಿಡ್ ನಿಮಯಗಳನ್ನು ಪಾಲಿಸಬೇಕು ಎಂದರು.