ಲಂಡನ್: ಮೊಣಕಾಲಿನ ಗಾಯದಿಂದ ವಿಶ್ವಕಪ್ ಟೂರ್ನಿಯಿಂದ ಹೊರಬಿದ್ದಿರುವ ಅಫ್ಘಾನಿಸ್ತಾನದ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಮೊಹಮ್ಮದ್ ಶೆಹಜಾದ್ ನಿವೃತ್ತಿಯ ಬಗ್ಗೆ ಮಾತನಾಡಿದ್ದಾರೆ.
ಕ್ರಿಕೆಟ್ ಆಡಲು ಫಿಟ್ ಆಗಿದ್ದರೂ ಟೀಮ್ ಮ್ಯಾನೇಜ್ಮೆಂಟ್ ಒತ್ತಾಯಪೂರ್ವಕವಾಗಿ ನನ್ನನ್ನು ತಂಡದಿಂದ ಹೊರದಬ್ಬಿದೆ ಎಂದು ಕೆಲ ದಿನದ ಹಿಂದೆ ನೋವಿನಿಂದ ಮಾತನಾಡಿದ್ದ ಅಫ್ಘನ್ ಕ್ರಿಕೆಟರ್ ಮೊಹಮ್ಮದ್ ಶೆಹಜಾದ್ ಇದೀಗ ಕ್ರಿಕೆಟ್ನಿಂದ ದೂರವಾಗುವ ಮನಸ್ಸು ಮಾಡಿದ್ದಾರೆ.
"ನನ್ನಿಂದ ಮ್ಯಾನೇಜ್ಮೆಂಟ್ಗೆ ಏನು ಸಮಸ್ಯೆಯಾಗಿದೆ ಎನ್ನುವುದು ನನಗೆ ತಿಳಿದಿಲ್ಲ. ಏನಾದರೂ ತೊಂದರೆ ಇದ್ದಲ್ಲಿ ನನ್ನ ಬಳಿ ಹೇಳಬೇಕಿತ್ತು. ಆದರೆ ನನ್ನನ್ನು ಆಡದಂತೆ ಮಾಡಿದರೆ ನಾನು ಕ್ರಿಕೆಟ್ ತೊರೆಯುತ್ತೇನೆ" ಎಂದು ಶೆಹಜಾದ್ ಹೇಳಿದ್ದಾರೆ.
ಅಫ್ಘಾನಿಸ್ತಾನಕ್ಕೆ ಭಾರಿ ಆಘಾತ... ಮೊಹಮ್ಮದ್ ಶಾಹಜಾದ್ ವಿಶ್ವಕಪ್ನಿಂದಲೇ ಔಟ್!
"ವಿಶ್ವಕಪ್ನಲ್ಲಿ ಆಡುವುದು ನನ್ನ ಕನಸಾಗಿತ್ತು. ಫಿಟ್ನೆಸ್ ಕಾರಣ ಹೇಳಿ 2015ರ ವಿಶ್ವಕಪ್ನಿಂದ ನನ್ನನ್ನು ದೂರ ಮಾಡಲಾಗಿತ್ತು. ನಾಲ್ಕು ವರ್ಷದ ಬಳಿಕ ಮತ್ತದೇ ಕಾರಣದಿಂದ ಟೀಮ್ನಿಂದ ಹೊರಗಿಡಲಾಗಿದೆ. ಈ ಘಟನೆಯಿಂದ ಕ್ರಿಕೆಟ್ ಮೇಲಿನ ಆಸಕ್ತಿ ಕಳೆದುಕೊಂಡಿದ್ದೇನೆ. ನಿವೃತ್ತಿ ಬಗ್ಗೆ ಕುಟುಂಬ ಹಾಗೂ ಸ್ನೇಹಿತರ ಬಳಿ ಚರ್ಚಿಸುತ್ತೇನೆ" ಎಂದು ಶೆಹಜಾದ್ ಮನಬಿಚ್ಚಿ ಮಾತನಾಡಿದ್ದಾರೆ.
ಆಗಿದ್ದೇನು..?
"ನಾನು ಎಂದಿನಂತೆ ನೆಟ್ನಲ್ಲಿ ಪ್ರಾಕ್ಟೀಸ್ನಲ್ಲಿ ಭಾಗಿಯಾಗಿದ್ದೆ. ಆ ವೇಳೆ ನನ್ನ ಬಳಿ ಬಂದ ಟೀಮ್ ಮ್ಯಾನೇಜರ್, ನೀನು ಆಡಲು ಅಸಮರ್ಥ ತಕ್ಷಣವೇ ಮನೆಗೆ ಹೊರಡು ಎಂದು ಹೇಳಿದರು. ಆ ವೇಳೆಗಾಗಲೇ ನನ್ನ ಬದಲಿ ಆಟಗಾರ(ಇಕ್ರಮ್ ಅಲಿ ಖಿಲ್)ನನ್ನು ಆರಿಸಿದ್ದರು. ಆದರೆ ನಾನು ಆಡಲು ಅಸಮರ್ಥ ಎನ್ನುವುದು ನನಗೇ ತಿಳಿದಿರಲಿಲ್ಲ" ಎಂದು ಶೆಹಜಾದ್ ನೋವಿನಿಂದ ಹೇಳಿದ್ದಾರೆ.
"ನಾನು ಅಸಮರ್ಥ ಆಗಿದ್ದಲ್ಲಿ ಮೊದಲೆರಡು ಪಂದ್ಯ ಆಡಲು ಸಾಧ್ಯವಾಗಿದ್ದು ಹೇಗೆ..? ಕೊಂಚ ರೆಸ್ಟ್ ಪಡೆದರೆ ನಾನು ಆಡಲು ಸಮರ್ಥನಾಗುತ್ತೇನೆ ಎಂದು ಫಿಸಿಯೋ ಹೇಳಿದ್ದರು. ಆದರೆ ಏಕಾಏಕಿ ನನ್ನನ್ನು ಟೂರ್ನಿಯಿಂದ ಹೊರದಬ್ಬಲಾಗಿದೆ" ಎಂದು ಶೆಹಜಾದ್ ಆಕ್ರೋಶ ಹೊರಹಾಕಿದ್ದಾರೆ.
ಪಾಕಿಸ್ತಾನ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಶೆಹಜಾದ್ಗೆ ಮೊಣಕಾಲಿಗೆ ಗಾಯವಾಗಿತ್ತು ಎನ್ನಲಾಗಿದೆ. ಇದರ ನಡುವೆಯೂ ಆಸ್ಟ್ರೇಲಿಯಾ ಹಾಗೂ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಶೆಹಜಾದ್ ಮೈದಾನಕ್ಕಿಳಿದಿದ್ದರು. ಮೊಹಮ್ಮದ್ ಶೆಹಜಾದ್ ಗಾಯ ಉಲ್ಬಣಗೊಂಡಿದೆ. ಈ ನಿಟ್ಟಿನಲ್ಲಿ ಮನೆಗೆ ತೆರಳಲು ಸೂಚಿಸಲಾಗಿದೆ ಎಂದು ಐಸಿಸಿ ತನ್ನ ಪ್ರಕಟಣೆಯಲ್ಲಿ ಹೇಳಿತ್ತು.