ಲಂಡನ್: ಜೂನ್ 16ರಂದು ವಿಶ್ವಕಪ್ನಲ್ಲಿ ಮಹತ್ವದ ಪಂದ್ಯ ನಡೆಯಲಿದ್ದು, ಸಾಂಪ್ರದಾಯಿಕ ಎದುರಾಳಿ ತಂಡ ಭಾರತ-ಪಾಕ್ ಮುಖಾಮುಖಿಯಾಗುತ್ತಿವೆ. ಈ ಪಂದ್ಯ ವೀಕ್ಷಣೆಗೆ ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದು, ಪಾಕ್ ಅಭಿಮಾನಿಯೋರ್ವ ಭಾರತಕ್ಕೆ ಬೆಂಬಲ ಸೂಚಿಸಲು ಮುಂದಾಗಿದ್ದಾರೆ.
63 ವರ್ಷದ ಮೊಹಮ್ಮದ್ ಬಶೀರ್, ಈಗಾಗಲೇ ಪಂದ್ಯ ವೀಕ್ಷಣೆ ಮಾಡಲು ಎಂಎಸ್ ಧೋನಿಯಿಂದ ಟಿಕೆಟ್ ಪಡೆದುಕೊಂಡಿದ್ದು, ಲಂಡನ್ಗೆ ಬಂದಿಳಿದಿದ್ದಾರೆ. ಎಂ.ಎಸ್.ಧೋನಿ ಜತೆ ಆತ್ಮೀಯ ಸಂಬಂಧವಿಟ್ಟುಕೊಂಡಿರುವ 'ಚಾಚಾ ಚಿಕಾಗೋ' ಖ್ಯಾತಿಯ ಕ್ರೀಡಾಭಿಮಾನಿ ಇದೇ ಕಾರಣಕ್ಕಾಗಿ ಇಂಡೋ-ಪಾಕ್ ಹೋರಾಟದಲ್ಲಿ ಭಾರತಕ್ಕೆ ತಮ್ಮ ಬೆಂಬಲ ವ್ಯಕ್ತಪಡಿಸುತ್ತಾರೆ.
ಈ ಹಿಂದೆ 2011ರ ವಿಶ್ವಕಪ್ ಟೂರ್ನಿಯ ಸೆಮಿಫೈನಲ್ನಲ್ಲಿ ಮೊದಲ ಸಲ ಮೊಹಾಲಿಗೆ ಆಗಮಿಸಿದ್ದ ಇವರಿಗೆ ಧೋನಿ ಟಿಕೆಟ್ ಕೊಡಿಸಿದ್ದರು. ಅಲ್ಲಿಂದ ಧೋನಿ ಹಾಗೂ ಚಾಚಾ ನಡುವಿನ ಸ್ನೇಹ ಗಾಢವಾಗಿದೆ. ಬಶೀರ್ ಯಾವುದೇ ಇಂಡೋ-ಪಾಕ್ ಪಂದ್ಯ ಮಿಸ್ ಮಾಡಿಕೊಂಡಿಲ್ಲ. ವಿಶ್ವದ ಯಾವುದೇ ಮೂಲೆಯಲ್ಲಿ ಪಂದ್ಯ ಆಯೋಜಿಸಿದರೂ ಚಾಚಾ ತೆರಳಿ ಪಂದ್ಯ ವೀಕ್ಷಿಸಿದ್ದಾರೆ.
ಈಗಾಗಲೇ ಪಾಕ್ ತಂಡದ ಆಟಗಾರರು ಉಳಿದುಕೊಂಡಿರುವ ಹೋಟೆಲ್ಗೆ ತೆರಳಿ ಸರ್ಫರಾಜ್ ಅಹ್ಮದ್, ಮೊಹಮ್ಮದ್ ಅಮೀರ್ ಹಾಗೂ ಹಸನ್ ಅಲಿ ಜತೆ ಮಾತನಾಡಿರುವ ಇವರು, ತಮ್ಮ ನೆಚ್ಚಿನ ಪ್ಲೇಯರ್ ಶೊಯೆಬ್ ಮಲಿಕ್ ಜತೆ ಸೆಲ್ಫಿ ಕೂಡ ತೆಗೆದುಕೊಂಡಿದ್ದಾರೆ.