ದಾವಣಗೆರೆ: ಯಾವುದೇ ಕಾರಣಕ್ಕೂ ಶಾಸಕಾಂಗ ಸಭೆ ಕರೆಯುವ ಅವಶ್ಯಕತೆ ಇಲ್ಲ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಶಾಸಕಾಂಗ ಸಭೆ ಅಗತ್ಯ ಇಲ್ಲ ಎಂದು ಶಾಸಕ ರೇಣುಕಚಾರ್ಯ ತಿಳಿಸಿದರು.
ಜಿಲ್ಲೆಯ ಹೊನ್ನಾಳಿಯಲ್ಲಿ ಮಾತನಾಡಿದ ಅವರು, ಯಾರು ಪಕ್ಷದಲ್ಲಿ ತಲೆ ಹರಟೆ ಮಾಡಿದ್ದರೂ ಅವರನ್ನು ಉಚ್ಚಾಟಿಸಿ ಎಂದು 65 ಶಾಸಕರು ಸಹಿ ಮಾಡಿದ ಪತ್ರ ನನ್ನ ಬಳಿ ಇದೆ. ಅಗತ್ಯ ಬಿದ್ದಾಗ ರಾಷ್ಟ್ರೀಯ ಅಧ್ಯಕ್ಷರು, ರಾಜ್ಯಾಧ್ಯಕ್ಷರಿಗೆ ತಲುಪಿಸುತ್ತೇನೆ. ನಮ್ಮಲ್ಲಿ ಸೋತವರು ಬಹಳಷ್ಟು ಜನ ಇದ್ದಾರೆ. ಇನ್ನು ಯಡಿಯೂರಪ್ಪ ಕೃಪಾಕಟಾಕ್ಷದಿಂದ ಸಚಿವರಾದವರು ಇದ್ದಾರೆ ಎಂದು ಕೆಲ ಸ್ವಪಕ್ಷದ ಸಚಿವರ ವಿರುದ್ದ ವಾಗ್ದಾಳಿ ನಡೆಸಿದರು.
ನೀವು ಶಾಸಕಾಂಗ ಸಭೆ ಕರೆಯಿರಿ ಎಂದು ಹೇಳಲು ಏನು ನೈತಿಕತೆ ಇದೆ. ಇದು ಮೂರು ಭಾಗವಾದ ಸರ್ಕಾರ ಎಂದು ಹೇಳ್ತೀರಿ. ಯಡಿಯೂರಪ್ಪ ಆಡಳಿತ ಮೆಚ್ವಿ ನೀವೇ ಐದು ವರ್ಷ ಸಿಎಂ ಆಗಿರುತ್ತಾರೆ ಎಂದು ಹೇಳಿದ್ದೀರಿ. ವಿನಾಕಾರಣ ಪ್ರಹ್ಲಾದ್ ಜೋಶಿ ಅವರ ಹೆಸರು ತರುವ ಕೆಲಸ ಮಾಡುತ್ತಿದ್ದೀರಿ. ದೆಹಲಿಗೆ ಹೋಗಿ ಲಾಭಿ ಮಾಡಿದರೆ ಏನು ಪ್ರಯೋಜನ. ನೀವು ದೆಹಲಿಯಲ್ಲಿ ಯಾವ ನಾಯಕರನ್ನು ಭೇಟಿ ಮಾಡಿಲ್ಲ. ಅವರ ಗೇಟು ಮುಟ್ಟಿ ಬಂದು ಫೋಟೋ ತೆಗೆಸಿಕೊಂಡಿದ್ದೀರಿ. ನನಗೆ ಸಿಕ್ಸರ್ ಹೊಡೆಯುವುದು ಗೊತ್ತು ಬೌಂಡರಿ ಬಾರಿಸುವುದು ಗೊತ್ತು ಎಂದು ಪರೋಕ್ಷವಾಗಿ ಸಚಿವ ಸಿ.ಪಿ ಯೋಗೇಶ್ವರ್ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಸಿಪಿವೈ ತಕ್ಷಣ ರಾಜೀನಾಮೆ ಕೊಡಬೇಕು. ಬಸವರಾಜ್ ಬೊಮ್ಮಾಯಿ ಅವರು ಮೆಗಾಸಿಟಿ ಪ್ರಕರಣದಲ್ಲಿ ಅವರನ್ನು ಬಂಧಿಸಬೇಕು. ಇಂತಹವರಿಂದ ಪಕ್ಷಕ್ಕೆ ಡ್ಯಾಮೇಜ್ ಆಗುತ್ತದೆ. ಅಖಾಡಕ್ಕೆ ಬಾ ನಮಗೆ ಹೇಗೆ ಪಟ್ಟು ಹಾಕಬೇಕು ಎಂದು ಗೊತ್ತಿದೆ ಎಂದು ಕಿಡಿ ಕಾರಿದರು.
ಯಡಿಯೂರಪ್ಪ ಅವರನ್ನ ಸಚಿವರನ್ನಾಗಿ ಮಾಡಿದ್ದೇ ದೊಡ್ಡ ತಪ್ಪು. 2023ಕ್ಕೆ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರುತ್ತದೆ. ಸಿಪಿ ಯೋಗಿಶ್ವರ್ ಅವರಿಗೆ ಲೂಟಿ ಮಾಡುವ ಖಾತೆ ಬೇಕಂತೆ. ಖಾತೆ ಹಸರಿನಲ್ಲಿ ಬ್ಲ್ಯಾಕ್ಮೇಲ್ ಮಾಡಲು ಬಂದರೆ ನಾವು ಸುಮ್ಮನಿರಲ್ಲ. ಜನರ ರಕ್ಷಣೆ ಮಾಡುವ ಬದಲು ಈ ರೀತಿ ರಾಜಕಾರಣ ಮಾಡುವುದು ಸರಿಯಲ್ಲ ಎಂದು ಸಚಿವ ಸಿಪಿ ಯೋಗೇಶ್ವರ್ ವಿರುದ್ಧ ಆಕ್ರೋಶ ಹೊರಹಾಕಿದರು.