ಸೇಡಂ(ಕಲಬುರಗಿ): ಅನಾರೋಗ್ಯದ ಹಿನ್ನೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಈಶಾನ್ಯ ಕರ್ನಾಟಕ ಸಾರಿಗೆ ಸಂಸ್ಥೆ ಅಧ್ಯಕ್ಷ ಹಾಗೂ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ ಮಂಗಳವಾರ ತಹಸೀಲ್ದಾರ್ ಕಚೇರಿಯಲ್ಲಿ ನಡೆದ ಕೋವಿಡ್ ಮತ್ತು ಕುಡಿವ ನೀರಿನ ಸಮಸ್ಯೆ ಕುರಿತು ಅಧಿಕಾರಿಗಳ ಸಭೆಯಲ್ಲಿ ದೂರವಾಣಿ ಮೂಲಕ ಪಾಲ್ಗೊಂಡರು.
ಈ ವೇಳೆ ಮಾತನಾಡಿದ ಅವರು, ಅನಾರೋಗ್ಯದ ಹಿನ್ನೆಲೆಯಲ್ಲಿ ಇನ್ನು 20 ದಿನ ವೈದ್ಯರು ವಿಶ್ರಾಂತಿ ಪಡೆಯಲು ಸೂಚಿಸಿದ್ದಾರೆ. ಅದಕ್ಕಾಗಿ ಬೆಂಗಳೂರಿನ ಆಸ್ಪತ್ರೆಯಲ್ಲಿದ್ದೇನೆ. ತಾಲೂಕು ಆಸ್ಪತ್ರೆಯಲ್ಲಿ ಕೋವಿಡ್ ಚಿಕಿತ್ಸೆಗಾಗಿ ಹೆಚ್ಚುವರಿಯಾಗಿ ಬೆಡ್‌ಗಳನ್ನು ಮಾಡಲು ಡಿಸಿ ಮತ್ತು ಡಿಹೆಚ್‌ಒ ಜೊತೆ ಮಾತನಾಡಿದ್ದೇನೆ. ಕೋಡ್ಲಾ ಗ್ರಾಮದಲ್ಲಿ ಕೋವಿಡ್ ಕೇರ್ ಸೆಂಟರ್ ಮಾಡಲಾಗಿದೆ. ಬಡವರಿಗೆ ನೆರವಾಗಿಸುವ ನಿಟ್ಟಿನಲ್ಲಿ ಎರಡು ತಿಂಗಳ ರೇಷನ್ ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ. ಬೇಸಿಗೆ ಹಿನ್ನೆಲೆಯಲ್ಲಿ ಜನತೆಗೆ ಕುಡಿವ ನೀರಿನ ಸಮಸ್ಯೆಯಾಗದಂತೆ ಅಧಿಕಾರಿಗಳು ಎಚ್ಚರವಹಿಸಬೇಕು ಎಂದು ಸೂಚನೆ ನೀಡಿದರು.
ತಾಲೂಕು ಆರೋಗ್ಯಾಧಿಕಾರಿ ಡಾ. ಸುರೇಶ ಮೇಕಿನ್ ಮಾತನಾಡಿ, ಕೆಲ ದಿನಗಳಿಂದ ಪಾಸಿಟಿವ್ ಪ್ರಕರಣಗಳು ಕಡಿಮೆಯಾಗಿವೆ. 387 ಸಕ್ರಿಯ ಪ್ರಕರಣಗಳಿವೆ. ಪಟ್ಟಣದಲ್ಲಿ ಡಿಸಿಗ್ನೇಟೆಡ್ ಕೋವಿಡ್ ಆಸ್ಪತ್ರೆ ಆರಂಭಿಸಲಾಗಿದೆ ಎಂದರು.
ಮಳಖೇಡದ ರಾಜಶ್ರೀ ಸಿಮೆಂಟ್ ಕಾರ್ಖಾನೆಯವರು ಸರಿಯಾದ ರೀತಿಯಲ್ಲಿ ಅಧಿಕಾರಿಗಳೊಂದಿಗೆ ಸ್ಪಂದಿಸುತ್ತಿಲ್ಲ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸತ್ಯಕುಮಾರ ಬಾಗೋಡಿ ಸಭೆಯ ಗಮನಕ್ಕೆ ತಂದರು.
ಸಿಪಿಐ ರಾಜಶೇಖರ ಹಳಗೋದಿ ಮಾತನಾಡಿ, ಕರ್ಫ್ಯೂ ನಿಯಮ ಪಾಲಿಸದೇ ಅಂಗಡಿಗಳನ್ನು ತೆರೆದರೆ ಅಂಗಡಿಯ ಫೋಟೊ ಪೊಲೀಸ್ ಅಧಿಕಾರಿಗಳಿಗೆ ಕಳುಹಿಸಿದರೆ ಕ್ರಮ ಜರುಗಿಸಲಾಗುವುದು. ಹೋಟೆಲ್ಗಳನ್ನು ಬಂದ್ ಮಾಡಿಸಲು ಪುರಸಭೆ ಅಧಿಕಾರಿಗಳು ಎಚ್ಚರವಹಿಸಬೇಕು. ಮದುವೆಗಳಲ್ಲಿ ಹೆಚ್ಚಿನ ಜನ ಸೇರುತ್ತಿದ್ದಾರೆ ಎಂದು ಹೇಳಿದರು.
12 ಸಾವು, ಸಂಶಯಾಸ್ಪದ ಸಾವುಗಳ ಲೆಕ್ಕವಿಲ್ಲ:
ತಾಲೂಕಿನಲ್ಲಿ ಹಲವಾರು ಕೋವಿಡ್ ಸಂಶಯಾಸ್ಪದ ಸಾವುಗಳಾಗಿವೆ. ಆದರೆ, 12 ಸಾವಿನ ಪ್ರಕರಣಗಳು ಮಾತ್ರ ಆರೋಗ್ಯ ಇಲಾಖೆಯಡಿ ದಾಖಲಾಗಿವೆ. ನಿತ್ಯ 400-500 ಜನರ ಕೋವಿಡ್ ಪರೀಕ್ಷೆಗೊಳಪಡುತ್ತಿದ್ದು, ಜೊತೆಗೆ ಲಸಿಕೆಯನ್ನೂ ಪಡೆಯುತ್ತಿದ್ದಾರೆ. ಎರಡು ಡೋಸ್ ಲಸಿಕೆ ಪಡೆದಾಗ ಮಾತ್ರ ಸುರಕ್ಷತೆ ಸಿಗಲಿದೆ ಎಂದರು.
ನಮ್ಮಲ್ಲಿ ಆಕ್ಸಿಜನ್ ಮತ್ತು ರೆಮ್ಡೆಸಿವಿರ್ ಇಂಜೆಕ್ಸನ್ ಕೊರತೆ ಇಲ್ಲ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ. ಸುರೇಶ ಮೇಕಿನ್ ಸಭೆಗೆ ತಿಳಿಸಿದ್ದಾರೆ.