ಕುಷ್ಟಗಿ(ಕೊಪ್ಪಳ): ಪಟ್ಟಣದ ಹೊರವಲಯದ ಕೊಳಚೆ ನಿರ್ಮೂಲನಾ ಮಂಡಳಿ ಮಾರುತಿ ನಗರದಲ್ಲಿ ಹುಡ್ಕೋ ಯೋಜನೆ ಅಡಿಯಲ್ಲಿ 22 ಲಕ್ಷ ರೂ. ವೆಚ್ಚದ ಸಿಸಿ ಕಾಮಗಾರಿಗೆ ಶಾಸಕ ಅಮರೇಗೌಡ ಪಾಟೀಲ ಭೂಮಿ ಪೂಜೆ ನೆರವೇರಿಸಿದರು.
ಆದರೆ ಸಿಸಿ ರಸ್ತೆ ಹಾಗೂ ಚರಂಡಿ ಕಾಮಗಾರಿಗೆ ಆಯ್ಕೆ ಮಾಡಿಕೊಂಡ ಜಾಗದಲ್ಲಿ ನೈಋತ್ಯ ರೈಲ್ವೆ ಇಲಾಖೆ ಗುರುತು ಮಾಡಿರುವ ಬಗ್ಗೆ ಸ್ಥಳೀಯರು ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ ಅವರ ಗಮನಕ್ಕೆ ತಂದರು. ಆಗ ಸಂಬಂಧಿಸಿದ ಇಲಾಖೆಗೆ ಕಾಮಗಾರಿಯನ್ನು ಸ್ಪಲ್ಪ ದಿನಗಳ ವರೆಗೆ ತಡೆಹಿಡಿಯುವಂತೆ ಸೂಚಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈಲ್ವೆ ಇಲಾಖೆಯ ಎಇಇ ಖುದ್ದಾಗಿ ಸ್ಥಳ ಪರಿಶೀಲಿಸಲು ಸೂಚಿಸಿರುವೆ. ಜಾಗ ರೈಲ್ವೆ ಇಲಾಖೆಯ ಅಧೀನದಲ್ಲಿದ್ದರೆ, ಈ ಕಾಮಗಾರಿಯನ್ನು ಬೇರೆಡೆ ಸ್ಥಳಾಂತರಿಸುವುದು ಅನಿವಾರ್ಯ ಎಂದರು.
ಈ ವೇಳೆ ಪುರಸಭೆ ಸದಸ್ಯರಾದ ವಸಂತ ಮೇಲಿನಮನಿ, ಗೀತಾ ಕೋಳೂರು, ಹುಡ್ಕೋ ಅಧಿಕಾರಿ ಶ್ರೀಪಾದ, ಮಹೇಶ ಕೋಳೂರು ಮತ್ತಿತರಿದ್ದರು.