ಬೆಂಗಳೂರು: ಹಾಸನ ಜಿಲ್ಲೆಯ ಜೆಡಿಎಸ್ ಶಾಸಕ ಹೆಚ್ ಕೆ ಕುಮಾರಸ್ವಾಮಿ ಅವರಿಗೆ ಸಚಿವ ಸ್ಥಾನ ನೀಡುವಲ್ಲಿ ಸಿಎಂ ಕುಮಾರಸ್ವಾಮಿ ಮತ್ತು ರೇವಣ್ಣ ನಡುವೆ ಭಿನ್ನಾಭಿಪ್ರಾಯ ತಲೆದೋರಿದೆ ಎಂಬ ಸುದ್ದಿ ರಾಜಕೀಯ ವಲಯದಲ್ಲಿ ಹರಿದಾಡುತ್ತಿದೆ.
ಸಿಎಂ ಕುಮಾರಸ್ವಾಮಿ ಹಾಸನ ಜಿಲ್ಲೆಯ ಸಕಲೇಶಪುರ ಶಾಸಕ ಕುಮಾರಸ್ವಾಮಿ ಅವರಿಗೆ ಪರಿಶಿಷ್ಟ ಜಾತಿ ವರ್ಗದ ಕೋಟಾದಲ್ಲಿ ಸಚಿವ ಸ್ಥಾನ ನೀಡಲು ಒಲವು ಹೊಂದಿದ್ದಾರೆ. ಆದರೆ ರೇವಣ್ಣ ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆಂದು ಹೇಳಲಾಗುತ್ತಿದೆ.
ಜೆಡಿಎಸ್ನ ಭದ್ರಕೋಟೆಯಾದ ಹಾಸನದಲ್ಲಿ ಎಸ್ಸಿ ವರ್ಗಕ್ಕೆ ಸೇರಿದ ಕುಮಾರಸ್ವಾಮಿಗೆ ಸಚಿವ ಸ್ಥಾನ ನೀಡಿದರೆ ಆ ವರ್ಗದ ಮತಬ್ಯಾಂಕ್ ಗಟ್ಟಿಗೊಳಿಸಲು ಹೆಚ್ಚು ಸಹಾಯಕವಾಗುತ್ತದೆ. ಬಿಜೆಪಿಯವರು ಪರಿಸ್ಥತಿ ಒದಗಿ ಬಂದರೆ ಹೆಚ್.ಕೆ. ಕುಮಾರಸ್ವಾಮಿಗೆ ಗಾಳ ಹಾಕುವುದನ್ನು ತಪ್ಪಿಸಿದಂತಾಗುತ್ತದೆ ಎನ್ನುವುದು ಸಿಎಂ ವಾದ ಎನ್ನಲಾಗುತ್ತಿದೆ.
ಕುಮಾರಸ್ವಾಮಿಗೆ ಸಚಿವ ಸ್ಥಾನ ನೀಡಿದ್ರೆ ಹಾಸನ ಜಿಲ್ಲೆಯಲ್ಲಿ ಅವರು ಮತ್ತಷ್ಟು ಬೆಳೆದು ಬಿಡುತ್ತಾರೆ. ಭವಿಷ್ಯದಲ್ಲಿ ಅವರು ತಮಗೆ ಎಲ್ಲಿ ಸ್ಪರ್ಧಿಯಾಗಿ ಬಿಡುತ್ತಾರೋ ಎನ್ನುವ ಆತಕದಿಂದ ರೇವಣ್ಣ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ ಎನ್ನಲಾಗ್ತಿದೆ.