ಉಳ್ಳಾಲ(ಮಂಗಳೂರು): ಚಂಡಮಾರುತದಿಂದ ಹಾನಿಗೊಳಗಾದ ಮನೆ ಮಂದಿಯನ್ನು ತಕ್ಷಣಕ್ಕೆ ಕಾಳಜಿ ಕೇಂದ್ರಕ್ಕೆ ಸ್ಥಳಾಂತರಗೊಳ್ಳಲು ಸೂಚಿಸಲಾಗಿದೆ. ಆದರೆ, ಕುಟುಂಬಸ್ಥರು ಶಾಶ್ವತವಾಗಿ ಮನೆ ಕಳೆದುಕೊಳ್ಳುವ ಸ್ಥಿತಿ ಇರುವುದರಿಂದ, ಸಂತ್ರಸ್ತ ಕುಟುಂಬದವರಿಗೆ ಮನೆ ರಚಿಸುವ ಕುರಿತು ಸರಕಾರಕ್ಕೆ ವರದಿ ಕಳುಹಿಸಿದ ನಂತರ ಚಿಂತನೆ ನಡೆಸಲಾಗುವುದು ಎಂದು ಬಂದರು ಹಾಗೂ ಮೀನುಗಾರಿಕಾ ಸಚಿವ ಎಸ್. ಅಂಗಾರ ತಿಳಿಸಿದರು.
ಚಂಡಮಾರುತದಿಂದ ಹಾನಿಗೊಳಗಾದ ಮೊಗವೀರಪಟ್ನ, ಬಟ್ಟಪ್ಪಾಡಿ, ಸೋಮೇಶ್ವರ ಹಿಂದೂ ರುದ್ರಭೂಮಿ ಹಾಗೂ ಸೋಮೇಶ್ವರದ ಮೋಹನ್ ಎಂಬವರ ಮನೆಗೆ ಭೇಟಿ ನೀಡಿದ ನಂತರ ತೊಕ್ಕೊಟ್ಟು ಕಾಪಿಕಾಡಿನ ಬಿಜೆಪಿ ಕಚೇರಿಯಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಸಚಿವ ಸ್ಥಾನ ಸಿಕ್ಕಿ ಕೇವಲ ಎರಡೂವರೆ ತಿಂಗಳಾಗಿದೆ. ಖಾತೆಗೆ ಸಂಬಂಧಿಸಿದ ಸಮಸ್ಯೆಗಳನ್ನು ತಿಳಿದುಕೊಳ್ಳುವ ಕೆಲಸ ಮಾಡಿದ್ದೇನೆ. ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಚಿಂತನೆಯನ್ನೂ ಜೊತೆಗೆ ನಡೆಸುತ್ತಿದ್ದೇನೆ. ಮಂಗಳೂರಿನ ಹಳೇ ಬಂದರು ಅಭಿವೃದ್ಧಿಗೆ ಸಂಬಂಧಿಸಿದ 23 ಕೋಟಿ ರೂ. ಅನುದಾನ ಸ್ಥಗಿತಗೊಂಡಿತ್ತು. ಅದನ್ನು ಸರಿಪಡಿಸುವ ಕೆಲಸಕ್ಕೆ ಮುಂದಾಗಿದ್ದೇನೆ ಎಂದರು.
ಇದೀಗ ಚಂಡಮಾರುತದಿಂದ ಉಳ್ಳಾಲ ಭಾಗದಲ್ಲಿ ವ್ಯಾಪಕ ನಷ್ಟ ಉಂಟಾಗಿದೆ. ಹಲವು ಕುಟುಂಬಗಳು ಮನೆಗಳನ್ನು ಕಳೆದುಕೊಳ್ಳುವ ಸ್ಥಿತಿ ಎದುರಾಗಿದೆ. ಸರ್ಕಾರ ತಾತ್ಕಾಲಿಕವಾಗಿ ಬೇರೆ ಮನೆಗಳಿಗೆ ಸ್ಥಳಾಂತರಗೊಳಿಸುವಂತೆ ಸೂಚಿಸಿದೆ. ಮನೆ ಕಳೆದುಕೊಂಡ ಕುಟುಂಬದವರಿಗೆ ಮನೆಗಳನ್ನು ರಚನೆ ಮಾಡಲು ತೀರ್ಮಾನ ಕೈಗೊಳ್ಳಲಾಗುವುದು. ಈ ಕುರಿತು ಸಂಬಂಧಿಸಿದ ಬಂದರು ಇಲಾಖೆಯ ನಿರ್ದೇಶಕ ಸ್ವಾಮಿ ಹಾಗೂ ಮೀನುಗಾರಿಕಾ ಇಲಾಖೆಯ ನಿರ್ದೇಶಕ ರಾಮಾಚಾರ್ ಅವರನ್ನು ಉಳ್ಳಾಲ ಪ್ರದೇಶಕ್ಕೆ ಸೋಮವಾರ ಭೇಟಿ ನೀಡುವಂತೆ ಸೂಚಿಸಿದ್ದೇನೆ ಎಂದು ಹೇಳಿದರು.
ವರದಿ ಸಂಗ್ರಹಿಸಿದ ಎರಡೇ ದಿನಗಳಲ್ಲಿ ತೀರ್ಮಾನ ತೆಗೆದುಕೊಳ್ಳುತ್ತೇವೆ. ಚಂಡಮಾರುತದ ಅಲೆಗಳು ಉಗ್ರವಾಗಿದೆ. ಕೊರೊನಾ ನಡುವೆ ಸರ್ಕಾರ ಚಂಡಮಾರುತದ ಕಡೆಯೂ ಗಮನ ಹರಿಸಬೇಕಿದೆ. ಮುಖ್ಯಮಂತ್ರಿಯವರ ಗಮನಕ್ಕೆ ತರುವ ಕೆಲಸವನ್ನು ಮಾಡುತ್ತೇನೆ. ಹಿಂದಿನ ಕಾಮಗಾರಿಗಳಿಗೆ ಅನುದಾನ ಮಂಜೂರಾಗದಿರುವ ಕುರಿತು ಬಂದರು ಇಲಾಖೆ ಅಧಿಕಾರಿಗಳ ಜೊತೆಗೆ ಮಾತನಾಡುತ್ತೇನೆ ಎಂದರು.
ಸುದ್ಧಿಗೋಷ್ಠಿಯಲ್ಲಿ ಬಿಜೆಪಿ ಕ್ಷೇತ್ರ ಅಧ್ಯಕ್ಷ ಚಂದ್ರಹಾಸ್ ಪಂಡಿತ್ ಹೌಸ್, ಯಶವಂತ್ ಅಮೀನ್ ಉಪಸ್ಥಿತರಿದ್ದರು.