ಹಾಸನ: ಎಸ್ಎಸ್ಎಲ್ಸಿ ಫಲಿತಾಂಶವನ್ನು ಸಚಿವ ಹೆಚ್ಡಿ ರೇವಣ್ಣ ರಾಜಕೀಕರಣಗೊಳಿಸಿದ್ದಾರೆ. ಬಿಜೆಪಿಗೆ ವೋಟ್ ಹಾಕಿದ ಕಾರಣದಿಂದಲೇ ಕರಾವಳಿ ಜಿಲ್ಲೆಗಳು ಫಲಿತಾಂಶದಲ್ಲಿ ಕೆಳ ಸ್ಥಾನಕ್ಕೆ ಕುಸಿದಿವೆ ಎಂದು ಫಲಿತಾಂಶದಲ್ಲೂ ರಾಜಕಾರಣ ಬೆರೆಸಿದ್ದಾರೆ.
ಇಂದು ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ನಮ್ಮ ಹಾಸನ ಮೊದಲ ಸ್ಥಾನಕ್ಕೆ ಬಂದಿದೆ. ರಾಮನಗರ ಎರಡನೇ ಸ್ಥಾನ ಪಡೆದಿದೆ. ಬಿಜೆಪಿಗೆ ವೋಟು ಹಾಕಿದ ದಕ್ಷಿಣ ಕನ್ನಡದವರು ಕೆಳ ಸ್ಥಾನಕ್ಕೆ ಹೋಗಿದ್ದಾರೆ. ಜಾತ್ಯಾತೀತ ಪಕ್ಷಗಳಿಗೆ ಮತ ಹಾಕಿದ್ದರೆ ಅದು ಪ್ರಥಮ ಸ್ಥಾನಕ್ಕೆ ಬರುತ್ತಿತ್ತು. ಬಿಜೆಪಿ ಅಲ್ಲಿ ಶಿಕ್ಷಣಕ್ಕೆ ಒತ್ತು ಕೊಡಲ್ಲವೆಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಇನ್ನು ಎಸ್ಎಸ್ಎಲ್ಸಿ ಪರೀಕ್ಷಾ ಫಲಿತಾಂಶದ ಸಾಧನೆಗೆ ಹಿಂದಿನ ಜಿಲ್ಲಾಧಿಕಾರಿ ಅವಳು ಏನ್ ಕಡಿದು ಕಟ್ಟೆ ಹಾಕಿದ್ದಾಳೆ. ಇದೆಲ್ಲಾ ನನ್ನೆಂಡ್ತಿ ಮಾಡಿರುವ ಸಾಧನೆ ಎಂದು ಏಕವಚನದಲ್ಲೇ ಜಿಲ್ಲೆಯ ಮಾಜಿ ಡಿಸಿ ರೋಹಿಣಿ ಸಿಂಧೂರಿ ವಿರುದ್ಧವೂ ಸಚಿವ ಹೆಚ್ ಡಿ ರೇವಣ್ಣ ಹರಿಹಾಯ್ದಿದ್ದಾರೆ.
ಹಿಂದಿನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಶಿಕ್ಷಕರಿಗೇ ಪರೀಕ್ಷೆ ಮಾಡಲು ಹೋಗಿದ್ದರು. ಆಗ ಶಿಕ್ಷಕರು ಉಗಿದಿದ್ದರು. ಈ ವಿಷಯ ಅಧಿವೇಶದಲ್ಲೂ ಚರ್ಚೆಯಾಗಿತ್ತು. ಹಳೆ ಡಿಸಿ ಎಷ್ಟು ಸಭೆಗಳನ್ನು ನಡೆಸಿದ್ದಾರೆ? ಯಾವ ಕ್ರಮಗಳನ್ನು ಕೈಗೊಂಡಿದ್ದಾರೆ? ಎಂಬುದರ ಬಗ್ಗೆ ದಾಖಲೆ ನೀಡಲಿ ಎಂದು ರೇವಣ್ಣ ಒತ್ತಾಯಿಸಿದರು.
ಈ ಬಾರಿ ಜಿಲ್ಲೆಯಲ್ಲಿ ಎಸ್ಎಸ್ಎಲ್ ಹಾಸನಕ್ಕೆ ಉತ್ತಮ ಫಲಿತಾಂಶ ಬರಲು ದೇವೇಗೌಡರ ಕೊಡುಗೆ ಇದೆ. ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಜಿಲ್ಲೆ ರಾಜ್ಯಕ್ಕೆ ನಂ.1 ಸ್ಥಾನ ಪಡೆದಿದೆ. ಇದಕ್ಕಾಗಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ, ಸರ್ಕಾರದ ಮುಖ್ಯ ಕಾರ್ಯದರ್ಶಿ ವಿಜಯ್ ಭಾಸ್ಕರ್ ಅವರಿಗೆ ಮೊದಲು ಅಭಿನಂದನೆ ಸಲ್ಲಿಸುತ್ತೇನೆ. ಪ್ರತಿ ಹಂತದಲ್ಲೂ ಸಭೆ ನಡೆಸಿ 2006 ರಿಂದ ಶಿಕ್ಷಣಕ್ಕೆ ಒತ್ತು ನೀಡಿದ್ದು ಕುಮಾರಸ್ವಾಮಿ ಅವರ ಸರ್ಕಾರ. ಜಿಲ್ಲಾ ಪಂಚಾಯತ್ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಭವಾನಿ ಅವರು ಪ್ರತಿ ಎರಡು ತಿಂಗಳಿಗೊಮ್ಮೆ ಸಭೆ ನಡೆಸುತ್ತಿದ್ದರು. ವಿದ್ಯಾರ್ಥಿಗಳಿಗೆ ವಿಶೇಷ ತರಬೇತಿ ನೀಡಿ ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದರು. ಸರ್ಕಾರಿ ಶಾಲೆಗಳ ಮೂಲಸೌಕರ್ಯಕ್ಕೆ ಸಿಎಂ ಹೆಚ್.ಡಿ. ಕುಮಾರಸ್ವಾಮಿ 1,600 ಕೋಟಿ ರೂಪಾಯಿ ಅನುದಾನ ನೀಡಿದ್ದರು. ಜಿಲ್ಲೆಯ ಎಲ್ಲಾ ಮುಖ್ಯೋಪಾಧ್ಯಾಯರು, ಶಿಕ್ಷಕರಿಗೆ ಗೌರವ ಸಲ್ಲಿಸುತ್ತೇನೆ ಎಂದು ರೇವಣ್ಣ ಹೇಳಿದರು.
ಹಾಸನ ಜಿಲ್ಲೆಗೆ ದೈವಾನುಗ್ರಹ ಇದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ. ಎಸ್. ಯಡಿಯೂರಪ್ಪ ಅವರಿಗೆ ಟ್ರೀಟ್ಮೆಂಟ್ ಮಾಡಲು ಬೇರೆಯವರಿದ್ದಾರೆ. ಸಿಎಂ ಹಗಲು ರಾತ್ರಿ ಕೆಲಸ ಮಾಡಿ ವಿಶ್ರಮಿಸುವುದು ತಪ್ಪಾ?. ಅವರು ಕಳೆದ ಒಂಬತ್ತು ತಿಂಗಳಿಂದ ಸರ್ಕಾರ ಉರುಳಿಸಲು ಯತ್ನಿಸಿದ್ದರು. ಬೆಳಗ್ಗೆ ಎದ್ರೆ ದೇವೇಗೌಡರ ಜಪ ಮಾಡದಿದ್ದರೆ, ಬಿಜೆಪಿಯವರಿಗೆ ನಿದ್ರೆ ಬರಲ್ಲ. ರಾಜ್ಯಕ್ಕೆ ಯಡಿಯೂರಪ್ಪ ಅವರ ಕೊಡುಗೆ ಏನು ಎಂದು ರೇವಣ್ಣ ಪ್ರಶ್ನಿಸಿದರು.
ಇನ್ನು ರೈತರ ಸಾಲಮನ್ನಾ ಬದಲು ಬೆಳೆಗಳಿಗೆ ಬೆಂಬಲ ಬೆಲೆ ಕೊಡಿ ಎಂದಿದ್ದ ನಟ ದರ್ಶನ್ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವ ರೇವಣ್ಣ, ನಿಮಾ ನಟರಿಗೆ ರೈತರ ಕಷ್ಟದ ಬಗ್ಗೆ ಗೊತ್ತಿದೆಯಾ. ಒಂದು ಫಿಕ್ಚರ್ಗೆ ಎಷ್ಟು ಸಂಭಾವನೆ ಪಡೆಯುತ್ತಾರೆ. ಅದರಲ್ಲಿ ಅರ್ಧದಷ್ಟು ಹಣ ರೈತರಿಗೆ ನೀಡಲಿ ಎಂದು ಸವಾಲು ಹಾಕಿದರು.
ಎಲೆಕ್ಷನ್ಗೆ ಹಣ ನೀಡಿ, ಎರಡು ಸಿನಿಮಾ ಫ್ರೀ ಆಗಿ ನಟಿಸುತ್ತೇನೆ ಎಂದು ದರ್ಶನ್ ಹಣ ಪಡೆದಿದ್ದಾರೆ ಎಂದು ಆರೋಪಿಸಿದ ಸಚಿವ ರೇವಣ್ಣ, ನಟರಿಗೆ ನಿರ್ಮಾಪಕರ ಬಗ್ಗೆ ಗೊತ್ತಿರುತ್ತದೆ. ರೈತರ ಸಂಕಷ್ಟ ಏನು ಗೊತ್ತು. ಸಿನಿಮಾಗೆ ಆರು ತಿಂಗಳು ವಿರಾಮ ನೀಡಲಿ. ಕಬ್ಬು, ಇತರೆ ಬೆಳೆಗಳ ಬೆಲೆಯ ಬಗ್ಗೆ ತಿಳಿದುಕೊಂಡು ಬೆಂಬಲ ಬೆಲೆ ಕೊಡಿಸಲಿ ಎಂದು ದರ್ಶನ್ಗೆ ತಿರುಗೇಟು ನೀಡಿದ್ರು.