ಕೇಪ್ಟೌನ್: ಟೈನಲ್ಲಿ ಅಂತ್ಯಗೊಂಡಿದ್ದ ಮೊದಲ ಟಿ20 ಪಂದ್ಯದಲ್ಲಿ ದ.ಆಫ್ರಿಕಾ ತಂಡ ಲಂಕಾ ವಿರುದ್ಧ ಸೂಪರ್ ಓವರ್ನಲ್ಲಿ 9 ರನ್ಗಳಿಂದ ರೋಚಕ ಜಯ ಸಾಧಿಸಿದೆ.
ಟಾಸ್ ಸೋತ ಲಂಕಾ ಮೊದಲು ಬ್ಯಾಟಿಂಗ್ ನಡೆಸಿ 20 ಓವರ್ಗಳಲ್ಲಿ ಕೇವಲ 134 ರನ್ಗಳನ್ನು ಕಲೆ ಹಾಕಿತು. ಕಮಿಂಡು ಮೆಂಡಿಸ್ 41 ರನ್ಗಳಿಸಿ ಲಂಕಾ ಪರ ಗರಿಷ್ಠ ಸ್ಕೋರ್ ಎನಿಸಿದರು. ಆಫ್ರಿಕಾ ಪರ ಪೆಹ್ಲುಕ್ವಾಯೋ 3, ತಾಹಿರ್, ರಬಡಾ, ಸ್ಟೈನ್, ಲುಥೋ ಸಿಂಪಾಲಾ ತಲಾ ಒಂದು ವಿಕೆಟ್ ಪಡೆದು ಲಂಕಾ ತಂಡವನ್ನು ಅಲ್ಪಮೊತ್ತಕ್ಕೆ ಕಟ್ಟಿ ಹಾಕಿದರು.
135 ರನ್ಗಳ ಗುರಿ ಪಡೆದ ಆಫ್ರಿಕಾ ತಂಡ ಮೊದಲ 10 ಓವರ್ಗಳಲ್ಲಿ ಡಿ ಕಾಕ್ 13, ರೀಝಾ ಹೆನ್ರಿಕ್ಸ್(08), ಡು ಪ್ಲೆಸಿಸ್ (21) ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಆದರೆ ಈ ಹಂತದಲ್ಲಿ ಜೊತೆಗೂಡಿದ ಮಿಲ್ಲರ್ (41) ಹಾಗೂ ವಾನ್ ಡರ್ ಡಾಸೆನ್(34) 66 ರನ್ಗಳ ಜೊತೆಯಾಟ ನೀಡಿ ತಂಡವನ್ನು ಗೆಲುವಿನ ಸನಿಹ ತಂದರು.
ಮಲಿಂಗಾ ಮ್ಯಾಜಿಕ್:
ಗೆಲುವಿಗೆ 4 ಓವರ್ಗಳಲ್ಲಿ 18 ರನ್ಗಳ ಅಗತ್ಯವಿದ್ದಾಗ 17 ನೇ ಓವರ್ ಎಸೆದ ಮಲಿಂಗಾ ಉತ್ತಮವಾಗಿ ಆಡುತ್ತಿದ್ದ ಡಾಸೆನ್ ವಿಕೆಟ್ ಕಬಳಿಸಿದರು. ನಂತರ ಅದೇ ಓವರ್ನಲ್ಲಿ ಮಿಲ್ಲರ್ ಕೂಡ ರನ್ಔಟ್ ಆದರು. ನಂತರದ ಓವರ್ನಲ್ಲಿ 10 ರನ್ ಬಂದಿತು. ಕೊನೆಗೆ 12 ಬಾಲಿಗೆ 6 ರನ್ಗಳ ಅವಶ್ಯಕತೆ ಇದ್ದಾಗ 19 ನೇ ಓವರ್ ಎಸೆದ ಮಲಿಂಗಾ ಕೇವಲ 1 ರನ್ ನೀಡಿ ಒಂದು ವಿಕೆಟ್ ಪಡೆದರು.
ಕೊನೆಯ ಓವರ್ನಲ್ಲಿ ಎಡವಿದ ಆಫ್ರಿಕಾ:
ಕೊನೆಯ 6 ಬಾಲಿಗೆ ಕೇವಲ 5 ರನ್ ಅಗತ್ಯವಿತ್ತು. ಇಸಿರು ಉದಾನ ಬೌಲಿಂಗ್ನಲ್ಲಿ ಮೊದಲ ಎಸೆತದಲ್ಲಿ ಸಿಂಗಲ್ ತೆಗೆದುಕೊಂಡ ಡುಮಿನಿ ಪ್ರಮಾದ ಎಸೆಗಿದರು. ನಂತರದ 3 ಎಸೆತಗಳಲ್ಲಿ ಡೇಲ್ ಸ್ಟೈನ್ ಕೇವಲ 1 ರನ್ ತೆಗೆದುಕೊಂಡರು. ಕೊನೆಯ 2 ಎಸೆತಗಳಲ್ಲಿ 3 ರನ್ಗಳ ಅಗತ್ಯವಿತ್ತು. 5ನೇ ಎಸೆತದಲ್ಲಿ ಕೇವಲ 1 ರನ್ ತೆಗೆದ ಡುಮಿನಿ 2 ನೇ ರನ್ಗಾಗಿ ಓಡುವಾಗ ರನ್ಔಟ್ ಆದರು. ಕೊನೆಯ ಎಸೆತದಲ್ಲಿ ತಾಹಿರ್ ಒಂದು ರನ್ ತೆಗೆದುಕೊಳ್ಳಲು ಯಶಸ್ವಿಯಾಗಿ ಪಂದ್ಯವನ್ನು ಟೈ ಮಾಡಿದರು.
ಸೂಪರ್ ಓವರ್ನಲ್ಲಿ ಮಿಂಚಿದ ಮಿಲ್ಲರ್- ತಾಹಿರ್:
ಮಲಿಂಗಾ ಎಸೆದ ಸೂಪರ್ ಓವರ್ನಲ್ಲಿ ಮಿಲ್ಲರ್ ತಲಾ ಒಂದು ಬೌಂಡರಿ-ಸಿಕ್ಸರ್ ಸಿಡಿಸಿ ಲಂಕಾಗೆ 15 ರನ್ಗಳ ಟಾರ್ಗೆಟ್ ನೀಡಿದರು. 15 ರನ್ ಬೆನ್ನತ್ತಿದ ಲಂಕಾ ತಾಹಿರ್ ಸ್ಪಿನ್ ಮೋಡಿ ಮುಂದೆ ಪರದಾಡಿ 5 ರನ್ಗಳಿಸಲಷ್ಟೇ ಶಕ್ತವಾಯಿತು. ದ.ಆಫ್ರಿಕಾ ತಂಡ ಮಿಲ್ಲರ್-ತಾಹಿರ್ ನೆರವಿನಿಂದ 9 ರನ್ಗಳಿಂದ ಜಯಬೇರಿ ಬಾರಿಸಿತು.