ಮೆಕ್ಸಿಕೊ ಸಿಟಿ : ಮೆಕ್ಸಿಕೊ ನಗರದ ಮೆಟ್ರೋ ಓವರ್‌ಪಾಸ್ ಕುಸಿದ ಪರಿಣಾಮ 15 ಮಂದಿ ದುರ್ಮರಣಕ್ಕೀಡಾಗಿದ್ದಾರೆ. ಓವರ್‌ಪಾಸ್ ಕುಸಿದಿದ್ದರಿಂದ ಚಲಿಸುತ್ತಿದ್ದ ಮೆಟ್ರೋ ರೈಲು ಕೆಳಗಿನ ರಸ್ತೆಗೆ ಧುಮುಕಿ ಸಾವು ನೋವುಗಳಾಗಿವೆ.
ಘಟನೆಯಲ್ಲಿ 70 ಜನರು ಗಾಯಗೊಂಡಿದ್ದು, 34 ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇನ್ನೂ ಸುಮಾರು ಜನ ರೈಲಿನೊಳಗೆ ಸಿಲುಕಿಕೊಂಡಿರಬಹುದು. ಅಲ್ಲದೆ ರೈಲು ಎರಡು ಭಾಗವಾಗಿ ವಿಭಜನೆಯಾಗಿದೆ ಎಂದು ಅಲ್ಲಿನ ಮೇಯರ್ ಕ್ಲೌಡಿಯಾ ಶೀನ್ಬೌಮ್ ಮಾಹಿತಿ ನೀಡಿದ್ದಾರೆ.
ಇನ್ನು, ಅವಶೇಷಗಳ ಅಡಿಯಲ್ಲಿ ಕಾರೊಂದು ಸಿಕ್ಕಿ ಬಿದ್ದಿದೆ. ಘಟನಾ ಸ್ಥಳದಲ್ಲಿ ರಕ್ಷಣಾ ಕಾರ್ಯ ಮುಂದುವರೆದಿದೆ. ಮೆಟ್ರೋ ಸೇತುವೆ ಮೇಲೆ ಅಳವಡಿಸಲಾದ ಬೀಮ್ ಒಂದು ಸಡಿಲಗೊಂಡಿತ್ತು. ರೈಲು ಅದರ ಮೇಲೆ ಹಾದು ಹೋಗುತ್ತಲೇ ಆ ಬೀಮ್ ಕುಸಿದು ಬಿದ್ದಿದೆ ಎಂದು ಶೀನ್ಬಾಮ್ ಹೇಳಿದರು.
ಮೆಟ್ರೋದ 12ನೇ ಸಾಲಿನಲ್ಲಿ ಈ ಅಪಘಾತ ಸಂಭವಿಸಿದ್ದು, ಇದರ ನಿರ್ಮಾಣ ಕಾಮಗಾರಿ ಮೇಲೆ ಹಲವು ದೂರು ಹಾಗೂ ಅಕ್ರಮಗಳ ಆರೋಪಗಳು ಕೇಳಿ ಬಂದಿವೆ. ಇದು ಒಂದು ಭಯಾನಕ ದುರಂತ ಎಂದು ಮೆಕ್ಸಿಕನ್ ವಿದೇಶಾಂಗ ಸಚಿವ ಮಾರ್ಸೆಲೊ ಎಬ್ರಾರ್ಡ್ ಟ್ವೀಟ್ ಮಾಡಿದ್ದಾರೆ.