ಬೆಂಗಳೂರು : ಕೋವಿಡ್ ಸೋಂಕು ನಿಯಂತ್ರಣಕ್ಕಾಗಿ ಸರ್ಕಾರ ಹೊರಡಿಸಿರುವ ವಾರಾಂತ್ಯ ಕರ್ಫ್ಯೂಗೆ ನಗರದಲ್ಲಿ ಉತ್ತಮ ಸ್ಪಂದನೆ ದೊರಕಿದೆ.
ಬೆಳಗ್ಗೆ ಬಹುತೇಕ ಮಾರುಕಟ್ಟೆಗಳು ತೆರೆದಿದ್ದು, 10 ಗಂಟೆ ನಂತರ ಅಂಗಡಿ- ಮುಂಗಟ್ಟುಗಳನ್ನು ಮುಚ್ಚಿ ವ್ಯಾಪಾರಸ್ಥರು ಕರ್ಫ್ಯೂ ಬೆಂಬಲಿಸಿದರು. ಜನಸಂಚಾರ ಮತ್ತು ವಾಹನ ಸಂಚಾರ ಗಣನೀಯವಾಗಿ ಕಡಿಮೆಯಾಗಿರುವುದು ಕಂಡು ಬಂದಿತು.
ವಾರಾಂತ್ಯ ಕರ್ಫ್ಯೂ ಹಿನ್ನೆಲೆ ಪೊಲೀಸರು ಕೆ.ಆರ್. ಮಾರುಕಟ್ಟೆಯಲ್ಲಿ ಅಂಗಡಿಗಳನ್ನು ಮುಚ್ಚಿಸಿದರು. ರೈತರು ಮತ್ತು ವ್ಯಾಪಾರಸ್ಥರು ಸೊಪ್ಪು ಹಾಗೂ ತರಕಾರಿಯನ್ನು ರಸ್ತೆಯಲ್ಲೇ ಚೆಲ್ಲಿ ಹೋದ ಘಟನೆ ನಡೆಯಿತು.
ನಗರದ ಮುಖ್ಯ ರಸ್ತೆಗಳು, ಮೇಲ್ಸೇತುವೆ ಮೇಲೆ ಪೊಲೀಸರು ಬ್ಯಾರಿಕೇಡ್ ಹಾಕಿದ್ದರು. ಅನಗತ್ಯವಾಗಿ ಓಡಾಡುವವರ ಮೇಲೆ ನಿಗಾವಹಿಸಿದ್ದರು. ಮಾಸ್ಕ್ ಧರಿಸದೆ ಅಡ್ಡಾಡುವವರನ್ನು ಹಿಡಿದು ದಂಡ ವಿಧಿಸಿದರು. ಆದ್ದರಿಂದ ವಾಹನ ಸಂಚಾರ ತೀರಾ ಇಳಿಮುಖವಾಗಿತ್ತು.
ಶೇ.10ರಷ್ಟು ಬಸ್‌ಗಳು ಸಂಚಾರ : ಕರ್ಫ್ಯೂ ಹಿನ್ನೆಲೆ ಅಗತ್ಯಕ್ಕೆ ತಕ್ಕಂತೆ ಬಿಎಂಟಿಸಿ ಬಸ್‌ಗಳ ಸಂಚಾರ ನಡೆಸಲಾಯಿತು. ಪ್ರತಿದಿನ 4,500ಕ್ಕೂ ಅಧಿಕ ಬಸ್ ಸಂಚಾರ ನಡೆಸುತ್ತಿದ್ದವು.
ಶನಿವಾರ 450 ಬಸ್‌ಗಳು ಮಾತ್ರ ರಸ್ತೆಗಿಳಿದ್ದವು. ಮೆಜೆಸ್ಟಿಕ್, ಸ್ಯಾಟಲೈಟ್‌ನ ಶಾಂತಿನಗರ, ಶಿವಾಜಿನಗರ ಸೇರಿ ಹಲವು ಬಸ್ ನಿಲ್ದಾಣಗಳು ಬೆಳಗ್ಗೆಯಿಂದಲೂ ಬಿಕೋ ಎನ್ನುತ್ತಿದ್ದವು. ಸರ್ಕಾರ ಘೋಷಿಸಿರುವ ವಾರಾಂತ್ಯ ಕರ್ಫ್ಯೂ ಜನರು ಸ್ವ ಇಚ್ಛೆಯಿಂದಲೇ ಸ್ಪಂದಿಸುತ್ತಿರುವ ವಾತಾವರಣ ಕಂಡುಬಂದಿತು.
ಪ್ರತಿಯೊಂದು ರಸ್ತೆಯಲ್ಲಿಯೂ ಪೊಲೀಸರನ್ನು ನಿಯೋಜಿಸಲಾಗಿತ್ತು. ಶನಿವಾರ ಸುಮಾರು 8 ಸಾವಿರಕ್ಕೂ ಅಧಿಕ ಪೊಲೀಸರು ಕರ್ತವ್ಯ ನಿರ್ವಹಿಸಿದ್ದು, ಅನಗತ್ಯ ಸಂಚಾರ ನಡೆಸುವವರ ಮೇಲೆ ಕಠಿಣ ಕ್ರಮಕೈಗೊಂಡರು.
ಕಾಮಾಕ್ಷಿಪಾಳ್ಯ, ಮೈಸೂರು ರಸ್ತೆ, ಮೆಜೆಸ್ಟಿಕ್, ಕೋರಮಂಗಲ, ವಿಮಾನ ನಿಲ್ದಾಣ ರಸ್ತೆ ಸೇರಿ ಹಲವೆಡೆ ಪೊಲೀಸರು ಸಂಚರಿಸುವವರನ್ನು ತಪಾಸಣೆ ನಡೆಸಿದರು. ಕೆಲ ಅಡ್ಡರಸ್ತೆಗಳಲ್ಲಿ ಪೊಲೀಸರು ಬಂದ್ ಮಾಡಿದ್ದರು.
ಕರ್ಫ್ಯೂ ವೇಳೆ ಅನಗತ್ಯ ಓಡಾಡಿದವರ ವಾಹನ ವಿಭಾಗವಾರು ಮಾಹಿತಿ
- ಬೆ.ಕೇಂದ್ರ 62
- ಪಶ್ಚಿಮ 336
- ಉತ್ತರ 192
- ದಕ್ಷಿಣ 40
- ಪೂರ್ವ 118
- ಆಗ್ನೇಯ 209
- ಈಶಾನ್ಯ 129
- ವೈಟ್‌ಫೀಲ್ಡ್ 63
- ಒಟ್ಟು1150