ಲಂಡನ್: ವಿಶ್ವಕಪ್ನಲ್ಲಿ ನ್ಯೂಜಿಲೆಂಡ್ ತಂಡ ಬಲಿಷ್ಠ ಭಾರತದೆದುರು ಸೋಲುಕಂಡರೂ ನ್ಯೂಜಿಲೆಂಡ್ ತಂಡದ ವಿಶ್ವಕಪ್ ಕನಸಿಗೆ ಯಾವುದೇ ದೊಡ್ಡ ಹೊಡೆತ ಉಂಟಾಗುವುದಿಲ್ಲ ಎಂದು ಕಿವೀಸ್ ಮಾಜಿ ನಾಯಕ ಡೇನಿಯಲ್ ವಿಟೋರಿ ಅಭಿಪ್ರಾಯ ಪಟ್ಟಿದ್ದಾರೆ.
12ನೇ ಆವೃತ್ತಿಯ ವಿಶ್ವಕಪ್ನಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ಸೋಲು ಕಾಣದ ತಂಡಗಳಾಗಿವೆ. ಜೂನ್ 12ರಂದು ನಡೆಯುವ ಪಂದ್ಯದಲ್ಲಿ ಯಾವ ತಂಡ ಸೋತರು ಮೊದಲ ಸೋಲಾಗಲಿದೆ. ಇನ್ನು 3 ದಿನ ಕಿವೀಸ್-ಭಾರತ ತಂಡಗಳ ಬ್ಯಾಟಲ್ಗೆ ಕಾಲಾವಕಾಶವಿದೆ. ಆದರೆ ನ್ಯೂಜಿಲೆಂಡ್ನ ಮಾಜಿ ನಾಯಕ ವಿಟೋರಿ ಮಾತ್ರ ತಮ್ಮ ತಂಡ ಭಾರತದೆದುರು ಸೋಲನುಭವಿಸಿದರೂ ಆಘಾತ ಪಡುವ ಅವಶ್ಯಕತೆಯಿಲ್ಲ ಎಂದಿದ್ದಾರೆ.
ಭಾರತದೆದುರು ಯಾವುದೇ ತಂಡ ಆಡಿದರೂ ಕ್ರೀಡಾಂಗಣದಲ್ಲಿ ಹೆಚ್ಚಿನ ಜನಸಂದಣಿ ಇರುತ್ತದೆ. ಅದರಲ್ಲಿ ಹೆಚ್ಚು ಭಾರತ ತಂಡಕ್ಕೆ ಬೆಂಬಲ ನೀಡುತ್ತಾರೆ. ಅದು ಎದುರಾಳಿ ತಂಡಕ್ಕೆ ಒತ್ತಡವನ್ನುಂಟು ಮಾಡುತ್ತದೆ. ನಿನ್ನೆ ನಡೆದ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲೂ ಹೆಚ್ಚಿನ ಜನರು ಭಾರತ ತಂಡಕ್ಕೆ ಬೆಂಬಲ ನೀಡಿದ್ದರು ಎಂದು ಸ್ಮರಿಸಿದರು.
ಭಾರತ ತಂಡದಲ್ಲಿ ಹೆಚ್ಚಿನ ಆಟಗಾರರು ಅನುಭವಿಗಳಾಗಿದ್ದಾರೆ. ಅದೇ ರೀತಿ ಇಂಗ್ಲೆಂಡ್ ಕೂಡ ಬಲಿಷ್ಠ ತಂಡವಾಗಿದ್ದು, ಈ ಬಾರಿ ಎರಡೂ ತಂಡಗಳು ಸೆಮಿಫೈನಲ್ ಪ್ರವೇಶಿಸುವ ನೆಚ್ಚಿನ ತಂಡಗಳಾಗಿವೆ ಎಂದರು.
ನ್ಯೂಜಿಲೆಂಡ್ ತಂಡ ಅಫ್ಘಾನಿಸ್ತಾನ, ಶ್ರೀಲಂಕಾ, ಬಾಂಗ್ಲಾದೇಶ ತಂಡಗಳ ವಿರುದ್ಧ ಗೆಲುವು ಸಾಧಿಸಿದೆ. ಆದರೆ ಮೊದಲ ಬಾರಿಗೆ ಬಲಿಷ್ಠ ತಂಡದೊಂದಿಗೆ ಕಣಕ್ಕಿಳಿಯುತ್ತಿರುವುದರಿಂದ ನ್ಯೂಜಿಲೆಂಡ್ ಮಾಜಿ ನಾಯಕ ಸೋಲಿನ ಭಯವನ್ನು ಬಹಿರಂಗವಾಗಿಯೇ ಹೇಳಿಕೊಂಡಿದ್ದಾರೆ.