ಧಾರವಾಡ: ಫೇಸ್ಬುಕ್‌ಗೆ ಪೊಟೋ ಹಾಕಿದ ಎಂಬ ಕಾರಣ ಹೇಳಿ ಮದುವೆಯಾದ ತಿಂಗಳೊಳಗೆ ತನಗೆ ಗಂಡನೇ ಬೇಡ ಎಂದು ಯುವತಿಯೊಬ್ಬಳು ಹಠ ಹಿಡಿದು ಕುಳಿತಿರುವ ಘಟನೆಯೊಂದು ಧಾರವಾಡದಲ್ಲಿ ನಡೆದಿದೆ.
ನಾಲ್ಕು ವರ್ಷಗಳಿಂದ ಪ್ರೀತಿಸಿ ಕಳೆದ ತಿಂಗಳಷ್ಟೆ ರಿಜಿಸ್ಟರ್ಡ್ ಮ್ಯಾರೇಜ್ ಮಾಡಿಕೊಂಡಿದ್ದ ಯುವತಿಯೊಬ್ಬಳು ಫೇಸ್ಬುಕ್‌ಗೆ ಫೊಟೋ ಹಾಕಿದ್ದಾನೆ ಎಂಬ ಕಾರಣ ಹೇಳಿ ನನಗೆ ಡೈವರ್ಸ್ ಬೇಕು ಎಂದು ಹೇಳುತ್ತಿದ್ದಾಳೆ.
ಧಾರವಾಡ ಜಿಲ್ಲೆ ಹುಬ್ಬಳ್ಳಿ ತಾಲೂಕಿನ ಮಿಶ್ರಿಕೋಟಿ ಗ್ರಾಮದ ಸುಮ (ಹೆಸರು ಬದಲಾಯಿಸಲಾಗಿದೆ) ಎಂಬ ಯುವತಿಯೇ ಹಠ ಹಿಡಿದು ಕುಳಿತಿದ್ದು ಡೈವರ್ಸ್ ಬೇಕೆಂದು ಹಠ ಹಿಡಿದರೆ, ಇತ್ತ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸಿ ಮದುವೆಯಾದ ಯುವಕ ಮಾತ್ರ ತನ್ನನ್ನು ಬಿಟ್ಟು ಹೋಗದಂತೆ ತನ್ನ ಪ್ರಿಯತಮೆಯೆದುರು ಅಂಗಲಾಚುತ್ತಿದ್ದಾನೆ.
ಇಲ್ಲಿದೆ ಪೂರ್ತಿ ಸ್ಟೋರಿ:
ಶಿವಮೊಗ್ಗ ಮೂಲದ ವಿನಾಯಕ ಪೂಜಾರ ಎಂಬ ಯುವಕ ಕಳೆದ ನಾಲ್ಕೈದು ವರ್ಷಗಳಿಂದ ಹುಬ್ಬಳ್ಳಿಯ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಈ ವೇಳೆ ಪದ್ಮಾ ಎಂಬ ಮಹಿಳೆಯೊಬ್ಬರ ಪರಿಚಯವಾಗಿದೆ. ಪದ್ಮಾ ಅವರ ಮನೆಯಲ್ಲೇ ಬಾಡಿಗೆಗಿದ್ದು, ಬಾಡಿಗೆ ಕೊಟ್ಟಿದ್ದ ಮನೆಯ ಒಡೆಯರ ಮಗಳೊಂದಿದೆ ಪ್ರೀತಿ ಆರಂಭವಾಗಿತ್ತು.
ಈ ವಿಷಯ ಯುವತಿಯ ತಾಯಿ ಪದ್ಮಾಗೂ ಗೊತ್ತಿದ್ದರೂ ಆಕ್ಷೇಪ ಎತ್ತದೇ ಸುಮ್ಮನಿದ್ದರಂತೆ. ಪ್ರೀತಿ ಮಾಡಿದ ಇಬ್ಬರೂ ಕಳೆದ ತಿಂಗಳು ಪರಸ್ಪರ ಒಪ್ಪಿ ಹುಬ್ಬಳ್ಳಿ ರಿಜಿಸ್ಟರ್ ಆಫೀಸ್ನಲ್ಲಿ ಮದುವೆಯಾಗಿದ್ದರು. ಮದುವೆಯ ವೇಳೆ ಸ್ವಒಪ್ಪಿಗೆಯ ಮೇರೆಗೆ ಯುವಕನನ್ನು ಮದುವೆಯಾಗುತ್ತಿರುವುದಾಗಿ ಬರವಣಿಗೆಯ ಮೂಲಕ ತಿಳಿಸಿ ಮದುವೆಯಾಗಿದ್ದ ಯುವತಿ ಈಗ ವರಸೆ ಬದಲಿಸಿದ್ದಾಳೆ.
ನಾನು ಪ್ರೀತಿ ಮಾಡಿದ್ದು ನಿಜ, ಆದರೆ ಅವನು ಫೇಸ್ಬುಕ್‌ಗೆ ಇಬ್ಬರೂ ಜೊತೆಯಿದ್ದ ಫೊಟೋ ಹಾಕಿ ನನ್ನ ಮಾನ ಮರ್ಯಾದೆ ಕಳೆದಿದ್ದಾನೆ. ನನಗೆ ಮೋಸ ಮಾಡಿದ್ದಾನೆ ಎಂದು ಹೇಳಿ ಆತನ ಜೊತೆ ಜೀವನ ನಡೆಸಲು ನಿರಾಕರಿಸುತ್ತಿದ್ದಾಳೆ. ಇದರಿಂದ ಕಂಗಾಲಾದ ಯುವಕ ನ್ಯಾಯಕ್ಕಾಗಿ ಅಂಗಲಾಚುತ್ತಿದ್ದಾನೆ. ಇನ್ನು ಈ ಯುವಕ ಸ್ಥಳಿಯ ಎನ್ ಜಿ ಒ ಒಂದರ ಮೊರೆ ಹೊಗಿದ್ದು, ಯಾರು ಎಷ್ಟೇ ಪ್ರಯತ್ನ ಪಟ್ಟರೂ ಸಹ ಅವಳು ಅವನೊಂದಿಗೆ ಬದುಕು ಸಾಗಿಸಲು ನಕಾರ ಎತ್ತುತ್ತಿದ್ದಾಳೆ. ಇದರಿಂದ ಕಂಗಾಲಾದ ಯುವಕ ಪತ್ನಿಯ ತಾಯಿಯೇ ಅವಳಿಗೆ ಇಲ್ಲದ ಸಲ್ಲದ್ದನ್ನೆಲ್ಲ ಹೇಳಿ ದೂರ ಮಾಡಲು ನೋಡುತ್ತಿದ್ದಾಳೆ. ಹೇಗಾದರೂ ಮಾಡಿ ನನ್ನ ಹೆಂಡತಿ ನನ್ನೊಂದಿಗೆ ಇದ್ದರೆ ಸಾಕು ಎನ್ನುತ್ತಿದ್ದಾನೆ.