ಬೆಂಗಳೂರು: ವಾರಾಂತ್ಯಕ್ಕೆ ಬೆಂಗಳೂರಿಗರನ್ನು ಕೈಬೀಸಿ ಕರೆಯುತ್ತಿದೆ ಲಾಲ್ ಬಾಗ್. ಇಲ್ಲಿನ ತರಹೇವಾರಿ ಮಾವು, ಹಲವು ಫಲ ಪ್ರಿಯರ ಸವಿ ತಣಿಸುತ್ತಿದೆ. ಸಸ್ಯಕಾಶಿ ಬೆಂಗಳೂರಿನ ಲಾಲ್ ಬಾಗ್ನಲ್ಲಿ ಮೇ 30ರಿಂದ ಜೂನ್ 24ರವರೆಗೆ ನಡೆಯುತ್ತಿರುವ ಮಾವು ಮತ್ತು ಹಲಸು ಮೇಳದಲ್ಲಿ 120ಕ್ಕೂ ಅಧಿಕ ಮಳಿಗೆಗಳನ್ನು ಹಾಕಲಾಗಿದೆ.
ಮೇಳಕ್ಕೆ ಮೇ 30ರಂದು ಮುಖ್ಯಮಂತ್ರಿ ಕುಮಾರಸ್ವಾಮಿ ಚಾಲನೆ ನೀಡಿದ್ದರು. ಭಾನುವಾರ ರಜೆ ಇರುವುದರಿಂದ ಬೆಂಗಳೂರಿನ ಜನಸಾಗರವೇ ಇತ್ತ ಧಾವಿಸಿತ್ತು. ಇಲ್ಲಿ ಮಾವಿನ 50ಕ್ಕೂ ಹೆಚ್ಚು ವಿವಿಧ ತಳಿಯ ಹಣ್ಣುಗಳು ಲಭ್ಯವಾಗಿದ್ದು, ಮಾವು ಪ್ರಿಯರ ಮನ ಗೆದ್ದಿದೆ. ವಿವಿಧ ತಳಿಯ ಹಲಸಿನ ಗಾತ್ರ, ರುಚಿ ಮೇಳದ ಮೆರಗನ್ನು ಹೆಚ್ಚಿಸಿದೆ. ಸದ್ಯ ಬೆಂಗಳೂರಿಗರು ಫಲ ಖರೀದಿ ಹಾಗೂ ಸವಿಯುವುದರಲ್ಲಿ ನಿರತರಾಗಿದ್ದಾರೆ.
ಎಲ್ಲ ತರಹದ ಮಾವು ಹಾಗೂ ಹಲಸು ಇರುವುದು ತುಂಬಾ ಖುಷಿ ತಂದಿದೆ. ವಾರಾಂತ್ಯಕ್ಕೆ ಇಲ್ಲಿಗೆ ಬಂದಿದ್ದು ಹೆಚ್ಚು ಸಂತಸವಾಗಿದೆ. ನಾವೂ ತಿಂದು ಮನೆಗೂ ತೆಗೆದುಕೊಂಡು ಹೋಗುತ್ತಿದ್ದೇವೆ. ಯೋಗ್ಯ ಬೆಲೆಯಲ್ಲಿ ಹಣ್ಣುಗಳು ಸಿಗುತ್ತಿರುವುದು ಇಲ್ಲಿನ ಆಕರ್ಷಣೆಯನ್ನು ಹೆಚ್ಚಿಸಿದೆ ಎಂದು ರಾಜೇಶ್, ಸುಕನ್ಯಾ ದಂಪತಿ ಈ ಟಿವಿ ಭಾರತದೊಂದಿಗೆ ಹಂಚಿಕೊಂಡರು.
ಇನ್ನು ಜನರ ಈ ಖರೀದಿಗೆ ರೈತರು ತುಂಬಾ ಹರ್ಷ ವ್ಯಕ್ತಪಡಿಸಿದ್ದಾರೆ. ಅತಿ ಹೆಚ್ಚು ಬಾದಮಿ, ಹಿಮಾಮಪ್ರಸಂದ್, ರಸಪುರಿ, ಮಲಿಕಾ, ದಶೇರಿ ಮಾವಿನ ಹಣ್ಣುಗಳಿಗೆ ಬೇಡಿಕೆ ಇದೆ. ಜನರಿಂದ ಉತ್ತಮ ಪ್ರತಿಕ್ರಿಯೆ ಬರುತ್ತಿದೆ. ಮಳೆ ಬರದೇ ಇದ್ದರೆ ಒಳ್ಳೆ ವ್ಯಾಪಾರ ಆಗುತ್ತೆ ಅಂತಾರೆ ಕೋಲಾರ ಜಿಲ್ಲೆ ರೈತ ಚಿನ್ನಪ್ಪ ರೆಡ್ಡಿ.