ಮಂಡ್ಯ: ಕೆಲವೇ ವರ್ಷಗಳ ಹಿಂದೆ ತನ್ನ ಜಲಸಂಪತ್ತಿನಿಂದ ಸಕ್ಕರೆ ಜಿಲ್ಲೆಯ ಜನರ ಅಕ್ಕರೆಗೆ ಕಾರಣವಾಗಿದ್ದ ಲೋಕಪಾವನಿ ಈಗ ಬರಡಾಗಿದೆ. ಅದಕ್ಕೆ ನಾನಾ ಕಾರಣಗಳಿವೆ.
ಲೋಕಪಾವನಿಯಲ್ಲೀಗ ಮರಳು ಮಾಫಿಯಾ ಕಾರುಬಾರು ಜೋರಾಗಿದೆ. ಸ್ಯಾಂಡ್ ಮಾಫಿಯಾ ನಡೆಸೋರು ಸಿಕ್ಕ ಸಿಕ್ಕ ಕಡೆಗಳೆಲ್ಲ ಒಡಲನ್ನೇ ಬಗೆದು ದೋಚಿಕೊಂಡು ಹೋಗಿದ್ದಾರೆ. ಸುಮಾರು 35 ಕಿಲೋಮೀಟರ್ ಉದ್ದದ ಲೋಕಪಾವನಿ ಒಣಗಿ ಹೋಗಿದೆ. ಮೊದಲಾದರೇ, ಇದರಲ್ಲಿ ಜಲಚರಗಳಿದ್ದವು. ಆದರೆ, ನೀರೇ ಇಲ್ಲದ ಮೇಲೆ ಜಲಚರಗಳೆಲ್ಲ ಜೀವ ಕಳೆದುಕೊಂಡವು. ಈಗ ಹುಡುಕಿದರೆ ಅಲ್ಲೋ ಇಲ್ಲೊಂದಿಷ್ಟು ನೀರು ನಿಂತಿರುವುದು ಕಾಣಸಿಗುತ್ತೆ. ಮೊದಲೇ ನೀರಿಲ್ಲದೇ ಬರಡಾಗಿರುವ ಲೋಕಪಾವನಿ ತನ್ನೊಡಲಿನಲ್ಲಿರುವ ಮರಳನ್ನೂ ಕಳೆದುಕೊಳ್ಳುತ್ತಿದ್ದಾಳೆ.
ನೀರು ನಿಲ್ಲದ ಮೇಲೆ, ಇರೋ ಅಲ್ಲೊಂದಿಷ್ಟು ಇಲ್ಲೊಂದಿಷ್ಟು ನಿಂತ ನೀರೂ ಈಗ ಬಿಸಿಲಿಗೆ ಆವಿಯಾಗುತ್ತಿದೆ. ಹೀಗಿದ್ದ ಮೇಲೆ ಅಂತರ್ಜಲ ವೃದ್ಧಿಸೋಕೆ ಸಾಧ್ಯವೇ..? ಲೋಕಪಾವನಿಯ ಸುತ್ತಮುತ್ತ ಕಿಲೋಮೀಟರ್‌ನ್ನಷ್ಟು ದೂರದಲ್ಲಿ ಎಲ್ಲೂ ಅಂತರ್ಜಲ ಕಾಣಿಸುತ್ತಿಲ್ಲ. ಕಾವೇರಿಯ ಉಪನದಿಯಾಗಿರುವ ಲೋಕಪಾವನಿಯಿಂದಾಗಿ ಇಲ್ಲಿನ ಸುತ್ತಲಿನ ಪರಿಸರದಲ್ಲಿ ರೈತರು ತಮ್ಮ ಕೃಷಿಗೆ ಇಲ್ಲಿನ ನೀರನ್ನೂ ಬಳಸಿಕೊಳ್ಳುತ್ತಿದ್ದರು. ಆದರೆ, ಈಗ ರೈತರಿಗೆ ಅಂತರ್ಜಲ ಸಿಗದೆ ಕೃಷಿಗೂ ಸಂಕಷ್ಟ ಎದುರಾಗಿದೆ. ಅಂತರ್ಜಲ ಕೃಷಿಗೆ ಸಿಗೋದು ಒತ್ತಟ್ಟಿಗಿರಲಿ, ದನಕರುಗಳಿಗೂ ಕುಡಿಯೋದಕ್ಕೆ ನೀರು ಸಿಗ್ತಿಲ್ಲ. ಈ ಮೊದಲು ಕೊರೆಯಿಸಿದ್ದ ಬೋರ್‌ವೆಲ್‌ಗಳಲ್ಲಿ ನೀರು ಬೀಳ್ತಿಲ್ಲ. ಈಗಂತೂ ಹೊಸದಾಗಿ ಯಾರೂ ಬೋರ್‌ವೆಲ್ ಕೊರೆಯಿಸುತ್ತಿಲ್ಲವಾದರೂ, ಅಪ್ಪಿತಪ್ಪಿ ಕೊರೆಯಿಸಲು ಮುಂದಾದ್ರೇ ನೀರೇ ಬೀಳ್ತಿಲ್ವಂತೆ. ಲೋಕಪಾವನಿ ಬತ್ತಿದ ಮೇಲೆ ತನ್ನ ಪ್ರಭಾವವನ್ನೇ ಕಳೆದುಕೊಂಡಿದೆ.
ಲೋಕಪಾವನಿ ಮೊದಲಿನಂತಾಗಲು ಸಾಧ್ಯವೇ? ಕಂಡಿತಾ ಅದು ಈಗಲೂ ಸಾಧ್ಯವಿದೆ. ಆದರೆ, ಸರ್ಕಾರ ಮೊದಲು ಎಚ್ಚೆತ್ತುಕೊಳ್ಳಬೇಕು. ಮೊದಲು ಇಲ್ಲಿ ಮರಳು ಮಾಫಿಯಾಗೆ ಕಡಿವಾಣ ಬೀಳಬೇಕಿದೆ. ಅಂತರ್ಜಲಮಟ್ಟ ವೃದ್ಧಿಸಲು ಯೋಜನೆಗಳನ್ನ ರೂಪಿಸಬೇಕಿದೆ. ಅದರಲ್ಲೂ ಹೂಳು ತೆಗೆಸುವ ಕಾರ್ಯವೂ ಸಮರೋಪಾದಿಯಲ್ಲಿ ನಡೆಯಬೇಕಿದೆ.