ಬೀದರ್: ಸ್ಥಳೀಯ ಸಂಸ್ಥೆಗಳ ಫಲಿತಾಂಶ ಕಾಂಗ್ರೆಸ್ ನಾಯಕರಿಗೆ ಹೊಸ ಭರವಸೆ ಮೂಡಿಸಿದೆ. ಔರಾದ್ ಪಟ್ಟಣ ಪಂಚಾಯತ್ ಹೊರತುಪಡಿಸಿ ಉಳಿದಂತೆ ಎಲ್ಲಾ ಮೂರು ಪುರಸಭೆ ಹಾಗೂ ಒಂದು ನಗರಸಭೆಯಲ್ಲಿ ಕಾಂಗ್ರೆಸ್ ಮೇಲುಗೈ ಸಾಧಿಸಿದೆ.
ಬೀದರ್ ಸ್ಥಳೀಯ ಚುನಾವಣೆಯಲ್ಲಿ ಹೆಚ್ಚಿನ ಗೆಲುವು ಸಾಧಿಸಿದ ಕಾಂಗ್ರೆಸ್ ಅಭ್ಯರ್ಥಿಗಳು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಕ್ಷೇತ್ರವಾದ ಭಾಲ್ಕಿ ಪುರಸಭೆಯ 27 ವಾರ್ಡ್ಗಳ ಪೈಕಿ 18 ವಾರ್ಡ್ಗಳಲ್ಲಿ ಕಾಂಗ್ರೆಸ್ ಗೆಲುವಿನ ನಗೆ ಬೀರಿದೆ. ಬಿಜೆಪಿ ಹಾಗೂ ಜೆಡಿಎಸ್ ತಲಾ ನಾಲ್ಕು ವಾರ್ಡ್ಗಳಲ್ಲಿ ಜಯ ಗಳಿಸಿವೆ. ಒಂದು ವಾರ್ಡ್ನಲ್ಲಿ ಸ್ವತಂತ್ರ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ. ಸಚಿವ ರಾಜಶೇಖರ್ ಪಾಟೀಲ್ ಕ್ಷೇತ್ರವಾದ ಹುಮನಾಬಾದ್ ಪುರಸಭೆ ಹಾಗೂ ಚಿಟಗುಪ್ಪಾ ಪುರಸಭೆಯಲ್ಲೂ ಕಾಂಗ್ರೆಸ್ ಗೆಲುವು ಸಾಧಿಸಿದೆ. ಹುಮನಾಬಾದ್ ಪುರಸಭೆಯ 27 ವಾರ್ಡ್ಗಳಿಗೆ ಚುನಾವಣೆ ನಡೆದಿದ್ದು, 20 ವಾರ್ಡ್ಗಳು ಕಾಂಗ್ರೆಸ್ ಪಾಲಾಗಿವೆ. ಬಿಜೆಪಿ ಎರಡು ವಾರ್ಡ್ಗಳಲ್ಲಿ ಗೆಲುವು ಸಾಧಿಸಿದ್ದರೆ, ಜೆಡಿಎಸ್ ಹಾಗೂ ಸ್ವತಂತ್ರ ಅಭ್ಯರ್ಥಿ ತಲಾ ಒಂದು ವಾರ್ಡ್ಗಳಲ್ಲಿ ಗೆದ್ದಿದ್ದಾರೆ.
ಇನ್ನು ಚಿಟಗುಪ್ಪ ಪುರಸಭೆಯ 23 ವಾರ್ಡ್ಗಳಲ್ಲಿ ಕಾಂಗ್ರೆಸ್ 13, ಬಿಜೆಪಿ 06, ಜೆಡಿಎಸ್ 03 ಹಾಗೂ ಬಿಎಸ್ಪಿ 1 ವಾರ್ಡ್ಗಳಲ್ಲಿ ತಮ್ಮ ಪ್ರಾಬಲ್ಯ ಮೆರೆದಿವೆ.
ಬಸವಕಲ್ಯಾಣ: ಇಲ್ಲಿನ ನಗರಸಭೆಯ 31 ವಾರ್ಡ್ಗಳ ಪೈಕಿ 18 ವಾರ್ಡ್ಗಳಲ್ಲಿ ಕಾಂಗ್ರೆಸ್ ಗೆದ್ದಿದೆ. 5 ವಾರ್ಡ್ಗಳಲ್ಲಿ ಬಿಜೆಪಿ, 3 ವಾರ್ಡ್ಗಳಲ್ಲಿ ಜೆಡಿಎಸ್ ಹಾಗೂ 4 ವಾರ್ಡ್ಗಳಲ್ಲಿ ಎಂಐಎಂ ಗೆಲುವು ಸಾಧಿಸಿದರೆ, ಮತ್ತೊಂದು ವಾರ್ಡ್ನಲ್ಲಿ ಸ್ವತಂತ್ರ ಅಭ್ಯರ್ಥಿ ಜಯದ ಬಾವುಟ ಹಾರಿಸಿದ್ದಾರೆ.
ಔರಾದ್ ಪಟ್ಟಣ: ಪಟ್ಟಣ ಪಂಚಾಯತ್ನ 20 ವಾರ್ಡ್ಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ 12, ಕಾಂಗ್ರೆಸ್ 06 ಹಾಗೂ 2 ವಾರ್ಡ್ಗಳಲ್ಲಿ ಸ್ವತಂತ್ರ ಅಭ್ಯರ್ಥಿಗಳು ಗೆದ್ದಿದ್ದಾರೆ.