ಲಿಂಗಸುಗೂರು (ರಾಯಚೂರು): ನಾರಾಯಣಪುರ ಅಣೆಕಟ್ಟೆ ಕ್ರೆಸ್ಟ್ ಗೇಟ್ ಮೂಲಕ ನೀರು ಕೃಷ್ಣಾ ನದಿಗೆ ಹರಿಯುತ್ತಿರುವ ರುದ್ರ ರಮಣೀಯ ನರ್ತನಕ್ಕೆ ಬಣ್ಣಬಣ್ಣದ ಲೈಟಿಂಗ್ ಮೆರಗು ನೀಡುದ್ದು ಪ್ರವಾಸಿಗರ ಕಣ್ಮನ ಸೆಳೆಯುತ್ತಿದೆ. ರಾಯಚೂರು, ವಿಜಯಪುರ, ಯಾದಗಿರಿ ಜಿಲ್ಲೆಗಳ ವ್ಯಾಪ್ತಿಗೆ ಒಳಪಡುವ ಈ ಅಣೆಕಟ್ಟೆ ಕ್ರೆಸ್ಟ್ ಗೇಟ್ಗಳಿಂದ ಲಕ್ಷಾಂತರ ಕ್ಯುಸೆಕ್ ನೀರನ್ನು ಕೃಷ್ಣಾ ನದಿಗೆ ಬಿಡಲಾಗುತ್ತಿದೆ.
ಹಗಲು ಕ್ರೆಸ್ಟ್ ಗೇಟ್ನಿಂದ ಶ್ವೇತ ವರ್ಣದ ಹರಳಿ ಚೆಕ್ ಆಕಾರದಲ್ಲಿ ನೀರು ನದಿಗೆ ಧುಮ್ಮಿಕ್ಕುವ ಚಿತ್ರಣ ಕಾಣುತ್ತೆ. ಆದ್ರೆ ಕತ್ತಲಾಗುತ್ತಿದ್ದಂತೆ ಕ್ರೆಸ್ಟ್ ಗೇಟ್ಗಳಲ್ಲಿ ಹಾಕಿರುವ ಬಣ್ಣ ಬಣ್ಣದ ಲೈಟಿಂಗ್‌ನಲ್ಲಿ ಹರಿಯುವ ನೀರು ರುದ್ರ ರಮಣೀಯವಾಗಿ ಕಂಗೊಳಿಸುತ್ತಿದೆ.
ನೀರಿನ ವೈಭವ ವೀಕ್ಷಣೆಗೆ ಆಗಮಿಸುತ್ತಿರುವ ಉತ್ತರ ಕರ್ನಾಟಕ ಭಾಗದ ವಿವಿಧ ಜಿಲ್ಲೆಗಳ ಪ್ರವಾಸಿಗರು ಹಗಲು ವೀಕ್ಷಿಸಬೇಕೋ? ರಾತ್ರಿ ವೀಕ್ಷಿಸಬೇಕೋ? ಎಂಬ ಗೊಂದಲದಲ್ಲಿದ್ದಾರೆ.
ಆದರೆ, ಅಣೆಕಟ್ಟೆ ಅಧಿಕಾರಿಗಳು ಪ್ರವಾಸಿಗರಿಗೆ ಬೆಳಿಗ್ಗೆ 10 ರಿಂದ ಸಂಜೆ 5ರವರೆಗೆ ಮಾತ್ರ ಒಳಗಡೆ ವೀಕ್ಷಣಾ ಪಾಯಿಂಟ್ ಬಳಿಗೆ ಬಿಡುತ್ತಾರೆ. ಸಂಜೆಯ ವೇಳೆಗೆ ಲೈಟಿಂಗ್ ಚಿತ್ರಣ ವೀಕ್ಷಣೆಗೆ ಅವಕಾಶ ನೀಡದೆ ಹೋಗಿದ್ದರಿಂದ ಜನತೆ ಮುಂಭಾಗದ ಸೇತುವೆಯಿಂದ ವೀಕ್ಷಿಸಿ ಹೋಗುತ್ತಿರುವುದು ಸಾಮಾನ್ಯವಾಗಿದೆ.