ಬೆಳಗಾವಿ : ರಾಜ್ಯದ ಜನತೆಯ ಆಶೀರ್ವಾದ ಪಡೆಯದೇ ಕುದುರೆ ವ್ಯಾಪಾರದಿಂದ ಬಂದಂತಹ ಸರ್ಕಾರದ ಕೋತಿ ಆಟವನ್ನು ರಾಜ್ಯದ ಜನರು ನೋಡುತ್ತಿದ್ದಾರೆ. ಆದಷ್ಟು ಬೇಗ ಬುದ್ಧಿಕಲಿಸಲಿದ್ದಾರೆ ಎಂದು ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಬಿಜೆಪಿ ವಿರುದ್ಧ ಹರಿಹಾಯ್ದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ಆಡಳಿತ ನಡೆಸಿದ ಏಳು ವರ್ಷದ ದಾರಿಯನ್ನು ಅವಲೋಕಿಸಿದಾಗ ಒಂದು ಕೂಡ ಸೈಂಟಿಫಿಕ್ ಆಗಿ ಕಾಣಿಸುತ್ತಿಲ್ಲ. ಬಿಜೆಪಿಯವರು ಏನು ಮಾಡ್ತಾರೆ, ಅದನ್ನು ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗುವ ಶಕ್ತಿ ಅಥವಾ ಬುದ್ಧಿವಂತಿಕೆ ಅವರಿಗಿಲ್ಲ ಎಂದರು.
ರಾಜ್ಯದಲ್ಲಿ ಕಳೆದ ಎರಡು ವರ್ಷಗಳಿಂದ ಬಿಜೆಪಿ ಆಡಳಿತವನ್ನು ರಾಜ್ಯದ ಜನರು ನೋಡುತ್ತಿದ್ದಾರೆ. ಆದ್ರೆ, ಜನರ ಆಶೀರ್ವಾದ ತೆಗೆದುಕೊಂಡು ಈ ಸರ್ಕಾರ ರಚನೆ ಆಗಿಲ್ಲ. ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದಲ್ಲಿನ 17 ಜನ ಶಾಸಕರ ಕುದುರೆ ವ್ಯಾಪಾರದಿಂದ ಬಂದಂತಾ ಈ ಸರ್ಕಾರದ ಎರಡು ವರ್ಷದ ಕೋತಿ ಆಟವನ್ನು ರಾಜ್ಯದ ಜನರು ನೋಡುತ್ತಿದ್ದಾರೆ. ಆದಷ್ಟು ಬೇಗ ಜನರು ಬುದ್ಧಿ ಕಲಿಸುತ್ತಾರೆ ಎಂದರು.
ಕಾಂಗ್ರೆಸ್ ಮಾಡಿದ ರಾಡಿಯನ್ನು ಬಿಜೆಪಿ ತೊಳೆಯುತ್ತಿದೆ ಎಂಬ ಬಿಜೆಪಿ ನಾಯಕರ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಅವರು, ದೇಶವನ್ನು ಬ್ರಿಟಿಷರ ಕೈಯಿಂದ ಸ್ವತಂತ್ರವನ್ನಾಗಿ ಮಾಡಿ ಇಡೀ ವಿಶ್ವದ ಎದುರಗಡೆ ಎರಡನೇ ದೊಡ್ಡ ರಾಷ್ಟ್ರ ಎಂಬುದನ್ನು ಬಿಂಬಿಸಿದ ಶ್ರೇಯಸ್ಸು ಕಾಂಗ್ರೆಸ್‌ಗೆ ಸಲ್ಲುತ್ತದೆ.
ಭಾಷಣಗಳಲ್ಲಿ ಸುಮಾರು ನಾವು ಮಾತನಾಡಬಹದು. ಆದ್ರೆ, ಕಳೆದ 70 ವರ್ಷಗಳಲ್ಲಿ ನಾವು ನಿಂತು ಮಾತನಾಡುವ ಸ್ವಾತಂತ್ರ್ಯವನ್ನು ಕೊಟ್ಟಿರುವುದೇ ಕಾಂಗ್ರೆಸ್ ಪಕ್ಷ. ಕಾಂಗ್ರೆಸ್ 70 ವರ್ಷದಲ್ಲಿ ಮಾಡಿದ ರೈಲ್ವೆ, ವಿಮಾನಯಾನ ಹಾಗೂ ದೊಡ್ಡ ದೊಡ್ಡ ಕಂಪನಿಗಳು ಕಟ್ಟಿದ್ದೇವೆ. ಆದ್ರೆ, ಬಿಜೆಪಿಯ ಏಳು ವರ್ಷದ ಆಡಳಿತದಲ್ಲಿ ರೈಲ್ವೆ, ಏರ್ ಇಂಡಿಯಾ, ಎಲ್ಐಸಿ, ಬಿಎಸ್‌ಎನ್‌ಎಲ್‌ಗಳನ್ನು ಮಾರಾಟ ಮಾಡುವ ಮೂಲಕ ಕಾಂಗ್ರೆಸ್ ಮಾಡಿರುವ ಕಾರ್ಯಗಳನ್ನು ಮಾರಿಕೊಂಡು ಹೋಗುತ್ತಿದ್ದಾರೆ ಎಂದು ಕಿಡಿಕಾರಿದರು.
ಬೆಲೆ ಏರಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ದೇಶದಲ್ಲಿ ಬಡವರು ಬದುಕಲೇಬಾರದು ಎಂಬ ಆಶಯವನ್ನು ಬಿಜೆಪಿ ಪಕ್ಷ ಇಟ್ಟುಕೊಂಡಿದೆ. ಬಡವರಿಗೆ ಕಿಂಚಿತ್ತೂ ಮರ್ಯಾದೆ ಕೊಡೋದಿಲ್ಲ. ಬಿಜೆಪಿ ಪಕ್ಷದ ಸಿದ್ಧಾಂತವೇ ಬೇರೆ ಇದೆ. ಹೀಗಾಗಿ, ಬಡವರ ಬಗ್ಗೆ ಇವರಿಗೆ ಕಾಳಜಿ ಇಲ್ಲ. ಆದ್ರೆ, ತಮ್ಮ ತಮ್ಮ ಅಧಿಕಾರ,ಕುರ್ಚಿಯನ್ನ ಹೇಗೆ ಉಳಿಸಿಕೊಳ್ಳಬೇಕು. ಯಾವ ಹಗರಣದಲ್ಲಿ ಎಷ್ಟು ದುಡ್ಡನ್ನು ಹೊಡಿಯಬೇಕು ಎಂಬುವುದರಲ್ಲೇ ಕೇಂದ್ರಿತವಾಗಿದ್ದಾರೆ.
ಆದ್ರೆ, ಕಾಂಗ್ರೆಸ್ ಪಕ್ಷ ಜಾರಿಗೆ ತಂದಿರುವ ಉದ್ಯೋಗ ಖಾತ್ರಿ ಯೋಜನೆ ಕೊರೊನಾ ಸಂದರ್ಭದಲ್ಲೂ ಜನರ ಹೊಟ್ಟೆ ತುಂಬಿಸುತ್ತಿದೆ. ಅದರಂತೆ ಅನ್ನಭಾಗ್ಯ ಯೋಜನೆ ಸೇರಿ ಇತರ ಕಾರ್ಯಕ್ರಮಗಳು ಜನರಿಗೆ ತಲುಪುತ್ತವೆ ಎಂದರು. ಪ್ರತಿಬಾರಿ ನಡೆಯುವ ಚುನಾವಣೆಯಲ್ಲೂ ಬಿಜೆಪಿ ಪಕ್ಷ ರಾಷ್ಟ್ರೀಯತೆ ಮತ್ತು ಹಿಂದುತ್ವದ ಆಧಾರದ ಮೇಲೆ ಜನರ ಬಳಿಗೆ ಹೋಗುತ್ತದೆ. ಅದೊಂದೇ ಬಿಜೆಪಿಯ ಅಜೆಂಡಾ. ಆದ್ರೆ, ಅದಕ್ಕೆ ನಮ್ಮ ವಿರೋಧವಿಲ್ಲ. ನಾವು ಕೂಡ ರಾಮಭಕ್ತರು.
ಬಿಜೆಪಿ ರಾಮಮಂದಿರ ನಿರ್ಮಾಣ ಮಾಡುವುದಕ್ಕೆ ಕಾಂಗ್ರೆಸ್ ಪಕ್ಷದ ಹಲವಾರು ಹಿರಿಯ ಮುಖಂಡರು ದೇಣಿಗೆ ಕೊಟ್ಟಿದ್ದಾರೆ. ರಾಮಮಂದಿರ ನಿರ್ಮಾಣವನ್ನೇ ಅಜೆಂಡಾ ಮಾಡಿಕೊಳ್ಳಬಾರದು. ಅದೊಂದು ಭಕ್ತಿ ಆಗಬೇಕು. ರಾಮನಿಂದ ರಾಜಕಾರಣ ಮಾಡಬಹುದು. ರಾಮನ ರಾಜಕಾರಣವನ್ನು ನಮ್ಮಲ್ಲಿ ಅಳವಡಿಸಿಕೊಂಡು ಸಮಾಜವನ್ನು ಸುಧಾರಣೆ ಮಾಡಬೇಕು ಎಂದರು.