ನವದೆಹಲಿ: ಬಹುಕೋಟಿ ರೂಪಾಯಿ ಮೇವು ಹಗರಣ ಸಂಬಂಧ ಜೈಲು ಸೇರಿರುವ ರಾಷ್ಟ್ರೀಯ ಜನತಾ ದಳ (ಆರ್ಜೆಡಿ) ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರ ಜಾಮೀನು ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ.
ಕಳೆದ ಎಂಟು ತಿಂಗಳಿನಿಂದ ಜೈಲಿನಲ್ಲಿರುವ ಲಾಲು ಅವರು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ತಮ್ಮ ಪಕ್ಷವನ್ನು ಮುನ್ನಡೆಸುವ ಸಲುವಾಗಿ ಜಾಮೀನು ನೀಡಬೇಕೆಂದು ಕೋರಿದ್ದರು. ಜತೆಗೆ ತಾವು ಅನಾರೋಗ್ಯದಿಂದ ಬಳಲುತ್ತಿರುವುದಾಗಿಯೂ ಕಾರಣ ಕೊಟ್ಟಿದ್ದರು.
ಲಾಲು ಅವರು ಸಲ್ಲಿಸಿರುವ ಜಾಮೀನು ಅರ್ಜಿಗೆ ಸಿಬಿಐ ಆಕ್ಷೇಪಣೆ ವ್ಯಕ್ತಪಡಿಸಿತ್ತು. ಲೋಕಸಭಾ ಚುನಾವಣೆ ತಯಾರಿಗಾಗಿ ಲಾಲು ಅವರಿಗೆ ಜಾಮೀನು ನೀಡುವುದಾದರೆ, ಜೈಲು ಸೇರಿರುವ ಉದ್ಯಮಿಗಳು ತಮ್ಮ ಉದ್ಯಮ ನಡೆಸುವ ಸಲುವಾಗಿ ಬೇಲ್ ನೀಡಿ ಎಂದು ಸುಪ್ರೀಂ ಕದ ತಟ್ಟುತ್ತಾರೆ ಎಂದು ಸಿಬಿಐ ತನ್ನ ಆಕ್ಷೇಪಣಾ ಅರ್ಜಿಯಲ್ಲಿ ಹೇಳಿತ್ತು.