ಮೊಹಾಲಿ: ಈ ಬಾರಿ ಐಪಿಎಲ್ನಲ್ಲಿ ವಿವಾದಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಅಂಪೈರ್ಗಳ ಬೇಜವಾಬ್ದಾರಿತನ ಇಂದಿನ ಪಂದ್ಯದಲ್ಲೂ ಮುಂದುವರಿದಿದ್ದು, ಓವರ್ ಒಂದರಲ್ಲಿ 7 ಎಸೆತ ಎಸೆದಿರುವ ಘಟನೆ ನಡೆದಿದೆ.
ಇಂದಿನ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಹಾಗೂ ಮುಂಬೈ ಇಂಡಿಯನ್ಸ್ ಮುಖಾಮುಖಿಯಾಗಿದ್ದು, ಕಿಂಗ್ಸ್ ನಾಯಕ ಅಶ್ವಿನ್ ಎಸೆದ ಮೊದಲ ಓವರ್ನಲ್ಲಿ ಅಂಪೈರ್ ಪ್ರಮಾದದಿಂದ 7 ಎಸೆತ ಎಸೆದಿದ್ದಾರೆ.
ಇನ್ನಿಂಗ್ಸ್ನ ಆರಂಭದ ಓವರ್ನಲ್ಲಿ ಅಶ್ವಿನ್ರ 6 ಎಸೆತ ಮುಗಿದರೂ ಅಂಪೈರ್ ಓವರ್ ಪೂರ್ಣಗೊಳಿಸದಿದ್ದರಿಂದ 7ನೇ ಎಸೆತವನ್ನು ಅಶ್ವಿನ್ ಎಸೆದಿದ್ದಾರೆ. ಈ ಬಾಲನ್ನು ಕ್ವಿಂಟನ್ ಡಿ ಕಾಕ್ ಬೌಂಡರಿ ಬಾರಿಸಿದ್ದಾರೆ.
ಮೊನ್ನೆಯಷ್ಟೇ ಆರ್ಸಿಬಿ ವಿರುದ್ಧದ ಪಂದ್ಯದಲ್ಲಿ ನಿರ್ಣಾಯಕವಾಗಿದ್ದ ಕೊನೆಯ ಎಸೆತ ನೋಬಾಲ್ ಆಗಿದ್ದರೂ ಗಮನಿಸದ ಅಂಪೈರ್ ಆರ್ಸಿಬಿ ಸೋಲಿಗೆ ಕಾರಣರಾಗಿದ್ದರು. ಇದರಿಂದ ಸಿಟ್ಟಿಗೆದ್ದಿದ್ದ ಆರ್ಸಿಬಿ ನಾಯಕ ಇದು ಕ್ಲಬ್ ಲೆವೆಲ್ ಕ್ರಿಕೆಟ್ ಅಲ್ಲ. ಅಂಪೈರ್ಗಳು ಜವಾಬ್ದಾರಿಯಿಂದ ವರ್ತಿಸಬೇಕು ಎಂದು ಅಂಪೈರ್ಗಳ ವಿರುದ್ಧ ಕಿಡಿಕಾರಿದ್ದರು.
ಇದೀಗ ಕೇವಲ 2 ದಿನದಲ್ಲೇ ಅಂಪೈರ್ಗಳು ಮತ್ತೊಂದು ಪ್ರಮಾದ ಎಸಗಿದ್ದು, ಐಪಿಎಲ್ನಂತಹ ದೊಡ್ಡ ಮಟ್ಟದ ಟೂರ್ನಿಗಳಲ್ಲಿ ಹೀಗಾಗುತ್ತಿರುವುದು ವಿಷಾದನೀಯ ಸಂಗತಿಯಾಗಿದೆ.