ನವದೆಹಲಿ: ವೈದ್ಯರ ಮೇಲೆ ಪಶ್ಚಿಮ ಬಂಗಾಳದಲ್ಲಿ ನಡೆದ ಹಲ್ಲೆಯನ್ನು ಖಂಡಿಸಿ ಭಾರತೀಯ ಮೆಡಿಕಲ್ ಅಸೋಸಿಯೇಷನ್ ಇಂದು ದೇಶವ್ಯಾಪಿ ಮುಷ್ಕರಕ್ಕೆ ಕರೆ ನೀಡಿದ್ದು, ರಾಷ್ಟ್ರದ ಹಲವೆಡೆ ಬಂದ್ ಬಿಸಿ ತಟ್ಟಿದೆ.
ಕೋಲ್ಕತ್ತಾದ ಎನ್ಆರ್ಎಸ್ ಮೆಡಿಕಲ್ ಕಾಲೇಜಿನ ವೈದ್ಯ ಡಾ.ಪರಿಭಾ ಮುಖರ್ಜಿಯ ಮೇಲೆ ಕೆಲ ದಿನದ ಹಿಂದೆ ಗುಂಪೊಂದು ಮಾರಣಾಂತಿಕ ಹಲ್ಲೆ ನಡೆಸಿತ್ತು. ಸದ್ಯ ಪರಿಭಾ ಜೀವನ್ಮರಣದ ಹೋರಾಟ ನಡೆಸುತ್ತಿದ್ದಾರೆ. ಈ ಘಟನೆಯನ್ನು ಖಂಡಿಸಿ ಇಂದು ರಾಷ್ಟ್ರವ್ಯಾಪಿ ಮುಷ್ಕರ ನಡೆಸಲಾಗುತ್ತಿದೆ.
ಇಂದು ದೇಶಾದ್ಯಂತ ಎಲ್ಲ ವೈದ್ಯರು ಕಪ್ಪು ಪಟ್ಟಿ ಧರಿಸಿ ಧರಣಿ ನಡೆಸುತ್ತಿದ್ದಾರೆ. ವೈದ್ಯರ ಸುರಕ್ಷತೆಗಾಗಿ ಸೂಕ್ತ ಕಾನೂನು ಜಾರಿಗೊಳಿಸಲು ಪ್ರಧಾನಿ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರಿಗೆ ಒತ್ತಾಯ ಮಾಡಿದ್ದಾರೆ. ದೆಹಲಿ, ಮುಂಬೈ, ಬೆಂಗಳೂರು ನಂತಹ ಪ್ರಮುಖ ನಗರಗಳಲ್ಲಿ ವೈದ್ಯರ ಮುಷ್ಕರದ ಬಿಸಿ ಜೋರಾಗಿದೆ.
ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್, ಘಟನೆಯ ಕುರಿತಾಗಿ ವಿಷಾದ ವ್ಯಕ್ತಪಡಿಸಿದ್ದಾರೆ. ಈ ಕುರಿತಾಗಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಜೊತೆಗೆ ಮಾತನಾಡುವ ಭರವಸೆ ನೀಡಿದ್ದಾರೆ.
ಲೋಕಸಭಾ ಚುನಾವಣೆ ವೇಳೆ ಪಶ್ಚಿಮ ಬಂಗಾಳದಲ್ಲಿ ಗಲಭೆ ಹಾಗೂ ಗಲಾಟೆಗಳು ಶುರುವಾಗಿದ್ದು, ಇನ್ನೂ ತಣ್ಣಗಾಗಿಲ್ಲ. ಸದ್ಯ ಈ ಗಲಾಟೆಯಲ್ಲಿ ವೈದ್ಯರ ಮೇಲೆ ಹಲ್ಲೆಯಾಗಿದ್ದು ದೇಶವ್ಯಾಪಿ ಮುಷ್ಕರಕ್ಕೆ ಕಾರಣವಾಗಿದೆ.