ಬೆಂಗಳೂರು: ರಾಜ್ಯ ಕಾಂಗ್ರೆಸ್ ನಾಯಕರ ಮೇಲೆ ಮುನಿಸಿಕೊಂಡು ನಾಮಪತ್ರ ಸಲ್ಲಿಕೆ ಮಾಡಿದ್ದ ತುಮಕೂರು ಸಂಸದ ಮುದ್ದಹನುಮೇಗೌಡ ಕೊನೆಗೂ ಸಮಾಧಾನಗೊಂಡು ಬಂಡಾಯ ನಾಮಪತ್ರ ವಾಪಸ್ ಪಡೆದಿದ್ದಾರೆ. ಇದಕ್ಕೆ ಪ್ರತಿಯಾಗಿ ಅವರಿಗೆ ಕಾಂಗ್ರೆಸ್ ಎಂಎಲ್ಸಿ ಸ್ಥಾನದ ಆಫರ್ ನೀಡಲು ಮುಂದಾಗಿದೆ ಎಂಬ ಮಾತು ಕೇಳಿ ಬರುತ್ತಿದೆ.
ಮೊನ್ನೆ ನಡೆದ ಮಾತುಕತೆ ವೇಳೆ ಭರವಸೆ ಕೊಟ್ಟಿರುವ ರಾಜ್ಯ ನಾಯಕರು, ಲೋಕಸಭೆ ಚುನಾವಣೆ ಮುಗಿಯುತ್ತಿದ್ದಂತೆ ಅವರಿಗೆ ಪರಿಷತ್ ಸದಸ್ಯ ಸ್ಥಾನ ಕೊಡಿಸುವ ಭರವಸೆ ನೀಡಿದ್ದಾರೆ ಎನ್ನಲಾಗಿದೆ. ನಾಮಪತ್ರ ವಾಪಸ್ ಪಡೆಯುವುದಕ್ಕೂ ಮೊದಲು ಸೂಕ್ತ ಸ್ಥಾನದ ಒತ್ತಾಯ ಮಾಡಿದ್ದ ಮುದ್ದಹನುಮೇಗೌಡಗೆ ಪಕ್ಷ ಈ ಭರವಸೆ ನೀಡಿದೆ.
ಸಂಸದರಾಗಿದ್ದ ಮುದ್ದಹನುಮೇಗೌಡ, ರಾಜ್ಯಸಭಾ ಸ್ಥಾನ ಕೊಡುವಂತೆ ಪಕ್ಷದ ಮೇಲೆ ಒತ್ತಡ ಹೇರಿದ್ದರು. ಸದ್ಯ ವಿ.ಎಸ್. ಉಗ್ರಪ್ಪ ಅವರಿಂದ ಖಾಲಿಯಾಗಿರುವ ಸ್ಥಾನ ಕೊಡುವ ಭರವಸೆ ನೀಡಿದ್ದಾರೆ. ತದನಂತರ ರಿಜ್ವಾನ್ ಅರ್ಷದ್ ಸಂಸದರಾಗಿ ಆಯ್ಕೆಯಾದರೆ, ಅವರಿಂದ ತೆರವಾಗುವ ಸ್ಥಾನ ಕೊಡಿಸುತ್ತೇವೆ ಎಂದು ರಾಜ್ಯ ನಾಯಕರು ಮನವೊಲಿಸುವ ಯತ್ನ ಮಾಡಿದ್ದಾರೆ. ಇದಕ್ಕೆ ಮುದ್ದಹನುಮೇಗೌಡ, ಉಗ್ರಪ್ಪರಿಂದ ಖಾಲಿಯಾದ ಸ್ಥಾನ ಬೇಡ ಎಂದಿದ್ದಾರಂತೆ. ಆದರೆ ಸದ್ಯ ಖಾಲಿ ಇರುವ ಸ್ಥಾನಕ್ಕೆ ಭರ್ತಿ ಮಾಡುವ ಪಟ್ಟಿಯಲ್ಲಿ ನಿಮ್ಮ ಹೆಸರು ಮೊದಲಿರುತ್ತೆ ಅಂತ ಭರವಸೆ ಕೊಟ್ಟು, ನಾಮಪತ್ರ ಹಿಂಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಅಲ್ಪಾವಧಿಗೆ ಅವಕಾಶ
ಉಗ್ರಪ್ಪ ಸ್ಥಾನ ಖಾಲಿಯಾಗಿದ್ರು, ಅವರ ಅವಧಿ ಉಳಿದಿರುವುದು ಬರೀ ಒಂದು ವರ್ಷ ಮೂರು ತಿಂಗಳು ಮಾತ್ರ. 2014 ರಲ್ಲಿ ಜು.1 ಪರಿಷತ್ ಸದಸ್ಯರಾಗಿದ್ದ ಉಗ್ರಪ್ಪ ಸದ್ಯ ಬಳ್ಳಾರಿಯಲ್ಲಿ ನಡೆದ ಉಪಚುನಾವಣೆಯಲ್ಲಿ ಗೆದ್ದು, ಆರು ತಿಂಗಳ ಹಿಂದಷ್ಟೇ ಸ್ಥಾನ ತ್ಯಜಿಸಿದ್ದರು. ಇದೀಗ ಅವರ ಸ್ಥಾನವನ್ನು ಮುದ್ದಹನುಮೇಗೌಡರಿಗೆ ನೀಡಿ, ತುಪ್ಪ ಸವರುವ ಕೆಲಸ ಮಾಡುತ್ತಿದೆ ಕಾಂಗ್ರೆಸ್ ಎನ್ನಲಾಗುತ್ತಿದೆ.