ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಒಡೆತನದ ಪಿಆರ್ ಕೆ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾದ ಮೊದಲ ಸಿನಿಮಾ 'ಕವಲುದಾರಿ' ಬಿಡುಗಡೆಯಾದ ಎರಡೇ ವಾರದಲ್ಲಿ ಬರೋಬ್ಬರಿ 6 ಕೋಟಿ ಗಳಿಕೆ ಮಾಡಿದೆ ಗೆಲುವಿನ ಸಂಭ್ರಮದಲ್ಲಿದೆ.
ಹೇಮಂತ್ ರಾವ್ ನಿರ್ದೇಶನದ ಕವಲುದಾರಿ ಸಿನಿಮಾ ಪತ್ತೇದಾರಿ ಕಥಾಹಂದರ ಹೊಂದಿದ್ದು ನೋಡುಗರಿಗೆ ಈ ಸಿನಿಮಾ ಹೊಸ ಅನುಭವ ನೀಡಿದೆ. ಇನ್ನೂ ಚಿತ್ರ ಬಾಕ್ಸ್ ಆಫೀಸ್ನಲ್ಲಿ ಹಿಟ್ ಆದ ಕಾರಣ ಚಿತ್ರತಂಡ ಸಕ್ಸಸ್ ಮೀಟ್ ಕರೆದು ಮಾಧ್ಯಮಗಳ ಜೊತೆ ಗೆಲುವಿನ ಖುಷಿಯನ್ನು ಹಂಚಿಕೊಂಡಿದ್ದಾರೆ.
ಕವಲುದಾರಿ ಚಿತ್ರವು ತಮಿಳು,ತೆಲುಗು ಹಾಗೂ ಹಿಂದಿಗೆ ರೀಮೇಕ್ ರೈಟ್ಸ್ ವಿಚಾರವಾಗಿ ಈಗಾಗಲೇ ಒಂದು ಸುತ್ತಿನ ಮಾತುಕಥೆ ನಡೆದಿರುವ ಬಗ್ಗೆ ನಿರ್ದೇಶಕ ಹೇಮಂತ್ ರಾವ್ ತಿಳಿಸಿದರು. ಚಿತ್ರದಲ್ಲಿ ಮುಖ್ಯಪಾತ್ರದಲ್ಲಿ ನಟಿಸಿರುವ ಅನಂತ್ ನಾಗ್ ಚಿತ್ರದ ಯಶಸ್ಸಿಗೆ ಸಂತಸ ವ್ಯಕ್ತಪಡಿಸಿ ಪ್ರೇಕ್ಷಕ ಪ್ರಭುಗಳಿಗೆ ಧನ್ಯವಾದ ಹೇಳಿದ್ದಾರೆ.
ನಂತರ ಮಾತಾಡಿದ ಚಿತ್ರದ ನಾಯಕ ರಿಷಿ ,ಉತ್ತಮ ಕಥಾಹಂದರದ ಸಿನಿಮಾಗಳನ್ನು ಯಾವತ್ತು ಸಿನಿ ಪ್ರಿಯರು ಕೈ ಬಿಟ್ಟಿಲ್ಲ ಅದೇ ರೀತಿ ನಮ್ಮ ಚಿತ್ರಕ್ಕೂ ಸಿನಿಪ್ರಿಯರು ಕೈ ಹಿಡಿದಿದ್ದಾರೆ. ಅಲ್ಲದೆ ನಮ್ಮ ಚಿತ್ರ ಮಲ್ಟಿಪ್ಲೆಕ್ಸ್ ಗಳಲ್ಲಿ ಉತ್ತಮ ಪ್ರದರ್ಶನ ಕಾಣ್ತಿದೆ ಎಂದು ಖುಷಿ ವ್ಯಕ್ತಪಡಿಸಿದರು.
ಪ್ರಸ್ತುತ ಕವಲುದಾರಿ ಸಿನಿಮಾ 180ಕ್ಕೂ ಹೆಚ್ಚು ಸ್ಕ್ರೀನ್ಗಳಲ್ಲಿ ಪ್ರದರ್ಶನ ಕಾಣುತ್ತಿದ್ದು, ಮುಂದಿನ ವಾರದಿಂದ ಆಸ್ಟ್ರೇಲಿಯಾ, ದುಬೈ ಹಾಗೂ ಅಮೇರಿಕಾದಲ್ಲೂ ಈ ಚಿತ್ರ ರಿಲೀಸ್ ಅಗಲಿದೆ ಎಂದು ವಿತರಕ ಪೈ ಅವರು ತಿಳಿಸಿದ್ದರು.