ಮುಂಬೈ: ವಿಶ್ವಕಪ್ ತಂಡಕ್ಕೆ ಆಧಾರ ಸ್ಥಂಭವಾಗಿರುವ ಜಸ್ಪ್ರೀತ್ ಬುಮ್ರಾ ನಿನ್ನೆ ನಡೆದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಗಾಯಕ್ಕೆ ತುತ್ತಾಗಿ ಕೋಟ್ಯಂತರ ಕ್ರಿಕೆಟ್ ಅಭಿಮಾನಿಗಳಿಗೆ ಆತಂಕ ತಂದೊಡ್ಡಿದ್ದಾರೆ.
ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆದ ಐಪಿಎಲ್ 2019ರ 3 ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಮುಂಬೈ ಇಂಡಿಯನ್ಸ್ ಮುಖಾಮುಖಿಯಾಗಿದ್ದವು. ಈ ಪಂದ್ಯದ ಕೊನೆಯ ಓವರ್ನ ಕೊನೆಯ ಎಸೆತ ಎಸೆದ ಬುಮ್ರಾ ಬ್ಯಾಟ್ಸಮನ್ ಹೊಡೆದ ಚೆಂಡನ್ನು ಹಿಡಿಯಲು ಹೋಗಿ ಎಡಗೈ ಭುಜದ ನೋವಿಗೆ ಒಳಗಾಗಿ ಕೆಳಗೆ ಬಿದ್ದರು.
ಬುಮ್ರಾ ನೆಲದ ಮೇಲೆ ಬಿದ್ದು ನೋವಿನಿಂದ ಒದ್ದಾಡುತ್ತಿದ್ದಂತೆ ಪಿಸಿಯೋ ತಕ್ಷಣ ಮೈದಾನಕ್ಕೆ ಬಂದು ಚಿಕಿತ್ಸೆ ನೀಡಿದ್ದರು. ಆದರೆ ಈ ಘಟನೆ ಮುಂಬೈ ಇಂಡಿಯನ್ಸ್ಗಿಂತ ಕೋಟ್ಯಂತರ ಕ್ರೀಡಾಭಿಮಾನಿಗಳಿಗೆ ಆಘಾತ ತಂದಿದ್ದು ಸುಳ್ಳಲ್ಲ. ಐಸಿಸಿ ವಿಶ್ವಕಪ್ಗೆ ಕೇವಲ 2 ತಿಂಗಳಿರುವಾಗ ಭಾರತ ತಂಡದ ಪ್ರಮುಖ ಬೌಲರ್ ಆದ ಬುಮ್ರಾಗೆ ಗಾಯವಾದರೆ ಕಂಡಿತ ಇದು ತಂಡಕ್ಕೆ ದೊಡ್ಡ ಹೊಡೆತವಾಗುತ್ತದೆ ಎಂಬ ಭಯ ಎಲ್ಲರಲ್ಲೂ ಮನೆಮಾಡಿತ್ತು.
ಪಂದ್ಯದ ಬಳಿಕ ಮುಂಬೈ ಇಂಡಿಯನ್ಸ್ ಆಡಳಿತ ಮಂಡಳಿ ಬುಮ್ರಾಗೆ ಯಾವುದೇ ರೀತಿಯ ಸೀರಿಯಸ್ ಇಂಜುರಿಯಾಗಿಲ್ಲ ಎಂದು ತಿಳಿಸಿದೆ. ಕೇವಲ ಭುಜಕ್ಕೆ ಸಣ್ಣ ಪೆಟ್ಟಾಗಿತ್ತು. ಬುಮ್ರಾ ಫಿಟ್ ಆಗಿದ್ದಾರೆ ಎಂದು ತಿಳಿಸಿರುವುದು ಇದೀಗ ಅಭಿಮಾನಿಗಳಲ್ಲಿ ಸಮಾಧಾನ ತಂದಿದೆ.
ನಿನ್ನೆ ನಡೆದ ಪಂದ್ಯದಲ್ಲಿ ರಿಷಭ್ ಅಬ್ಬರಕ್ಕೆ ಸಿಲುಕಿದ ಮುಂಬೈ ತನ್ನ ಮೊದಲ ಪಂದ್ಯದಲ್ಲೇ 37 ರನ್ಗಳ ಸೋಲನುಭವಿಸಿತು. ಪಂತ್ ಕೇವಲ 27ಎಸೆತಗಳಲ್ಲಿ 7 ಸಿಕ್ಸರ್ ಹಾಗೂ 7 ಬೌಂಡರಿ ನೆರವಿನಿಂದ 78 ರನ್ಗಳಿಸಿ ಮುಂಬೈಗೆ ಆಘಾತ ನೀಡಿದ್ದರು.