ನವದೆಹಲಿ: ಇಂಟರ್ನೆಟ್ ಬಳಕೆಯಲ್ಲಿ ಮುಂಚೂಣಿಯಲ್ಲಿರುವ ಭಾರತ ದೇಶದಲ್ಲಿ 4G ವೇಗ ಕುಸಿತವಾಗಿದೆ ಎಂದು ವರದಿ ತಿಳಿಸಿದೆ.
ಓಕ್ಲಾ(Ookla) ಎನ್ನುವ ಸಂಸ್ಥೆ ಮೊಬೈಲ್ ನೆಟ್ವರ್ಕ್ ವೇಗದ ಕುರಿತಂತೆ ಪರೀಕ್ಷೆ ನಡೆಸಿದ್ದು, ಕಳೆದ ವರ್ಷಕ್ಕೆ ಹೋಲಿಕೆ ಮಾಡಿದಲ್ಲಿ ಈ ವರ್ಷ ಇಂಟರ್ನೆಟ್ ವೇಗ ಕುಸಿತವಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
2018ರಲ್ಲಿ ಮೊಬೈಲ್ ಇಂಟರ್ನೆಟ್ ವೇಗದ ವಿಚಾರದಲ್ಲಿ 109ನೇ ಸ್ಥಾನದಲ್ಲಿದ್ದ ಭಾರತ, ಈ ವರ್ಷ 121ನೇ ಸ್ಥಾನಕ್ಕೆ ಕುಸಿತ ಕಂಡಿದೆ. ಸ್ಥಿರ ಬ್ರಾಡ್ಬ್ಯಾಂಡ್ ವೇಗದಲ್ಲಿ 67ರಿಂದ 68ನೇ ಸ್ಥಾನಕ್ಕೆ ಭಾರತ ತಳ್ಳಲ್ಪಟ್ಟಿದೆ.
ಓಕ್ಲಾ ಸಂಸ್ಥೆ ಇಂಟರ್ನೆಟ್ ವೇಗಕ್ಕೆ ಸಂಬಂಧಿಸಿದಂತೆ ಪ್ರತಿ ತಿಂಗಳು ಸ್ಪೀಡ್ ಟೆಸ್ಟ್ ನಡೆಸುತ್ತದೆ.
ಭಾರತದಲ್ಲಿ ಪ್ರಸ್ತುತ ಮೊಬೈಲ್ ಇಂಟರ್ನೆಟ್ನ ಸರಾಸರಿ ವೇಗ 10.71 Mbps ಇದ್ದು ಸ್ಥಿರ ಬ್ರಾಡ್ಬ್ಯಾಂಡ್ 29.25 Mbps ವೇಗವನ್ನು ಹೊಂದಿದೆ.
65.41 Mbps ಮೂಲಕ ಮೊಬೈಲ್ ಇಂಟರ್ನೆಟ್ ವೇಗದಲ್ಲಿ ನಾರ್ವೆ ಅಗ್ರಸ್ಥಾನದಲ್ಲಿದ್ದರೆ, 197.50 Mbps ಮೂಲಕ ಸ್ಥಿರ ಬ್ರಾಡ್ಬ್ಯಾಂಡ್ನಲ್ಲಿ ಸಿಂಗಾಪುರ ಪ್ರಥಮ ಸ್ಥಾನ ಪಡೆದಿದೆ.
ಇಂಟರ್ನೆಟ್ ವೇಗದ ಕುಸಿತಕ್ಕೆ ಕಾರಣ ಏನು..?
ನೆಟ್ವರ್ಕ್ಗಳು ಅತ್ಯಂತ ಸಂಕೀರ್ಣವಾಗಿದ್ದು ಭೌತಿಕ ಮೂಲಭೂತ ಸೌಕರ್ಯಗಳ ಗುಣಮಟ್ಟ ಹಾಗೂ ಭೌಗೋಳಿಕ ಪ್ರದೇಶಗಳಿಂದ ಇಂಟರ್ನೆಟ್ ವೇಗದಲ್ಲಿ ಬದಲಾವಣೆಗಳಾಗುತ್ತವೆ ಎಂದು ಓಕ್ಲಾ ಸಂಸ್ಥೆ ಸಹ ಸಂಸ್ಥಾಪಕ ಹಾಗೂ ಪ್ರಧಾನ ವ್ಯವಸ್ಥಾಪಕ ಡಗ್ ಸಟಲ್ಸ್ ಕಾರಣ ನೀಡಿದ್ದಾರೆ.