ಮೈಸೂರು: ಇತ್ತೀಚೆಗೆ ಇಲ್ಲಿನ ಮಹಾನಗರ ಪಾಲಿಕೆಯ ಮೇಯರ್ ರುಕ್ಮಿಣಿ ಅವರ ಸದಸ್ಯತ್ವದ ರದ್ದತಿ ರಾಜ್ಯಾದ್ಯಂತ ಸುದ್ದಿಯಾಗಿತ್ತು. ಇದೀಗ ಜೂನ್ 11 ರಂದು ನಡೆಯಬೇಕಿದ್ದ ಮೇಯರ್ ಸ್ಥಾನದ ಚುನಾವಣೆಗೆ ಹೈಕೋರ್ಟ್ ಜೂನ್ 21ರ ವರೆಗೆ ತಡೆಯಾಜ್ಞೆ ನೀಡಿದೆ.
ಮೇಯರ್ ಸ್ಥಾನದಲ್ಲಿದ್ದ ರುಕ್ಮಿಣಿ ಮಾದೇಗೌಡ ಅವರು ಚುನಾವಣಾ ಆಯೋಗಕ್ಕೆ ಸರಿಯಾದ ಆಸ್ತಿ ವಿವರ ಸಲ್ಲಿಸದ ಕಾರಣ ಅವರ ಸದಸ್ಯತ್ವ ರದ್ದಾಗಿತ್ತು. ಈ ಹಿನ್ನೆಲೆಯಲ್ಲಿ ಜೂನ್ 11 ರಂದು ಮೇಯರ್ ಸ್ಥಾನಕ್ಕೆ ಚುನಾವಣೆ ನಡೆಸಲು ದಿನಾಂಕ ನಿಗದಿಮಾಡಿತ್ತು. ಆದರೆ, ಕೋವಿಡ್ ಸಂದರ್ಭದಲ್ಲಿ ಚುನಾವಣೆ ಬೇಡ ಎಂದು ಮೈಸೂರಿನ ಪ್ರದೀಪ್ ಎಂಬುವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.
ನ್ಯಾ. ಸಚಿನ್ ಶಂಕರ್ ಮೊಗದಂ ಅವರಿದ್ದ ಏಕಸದಸ್ಯ ಪೀಠವು ಅರ್ಜಿಯ ವಿಚಾರಣೆ ನಡೆಸಿತು. ಈ ವೇಳೆ ಅರ್ಜಿದಾರರ ಪರ ವಕೀಲ ಎಲ್.ಎಂ ಚಿದಾನಂದಯ್ಯ ವಾದ ಮಂಡಿಸಿ, ಮೈಸೂರು ನಗರದಲ್ಲಿ ಕೋವಿಡ್ ಪಾಸಿಟಿವ್ ಪ್ರಕರಣಗಳು ತೀವ್ರವಾಗಿದ್ದು, ಸರ್ಕಾರ ಲಾಕ್ ಡೌನ್ ಘೋಷಿಸಿ ಹಲವು ನಿರ್ಬಂಧ ಹೇರಿದೆ. ಇಂತಹ ಸಂದರ್ಭದಲ್ಲಿ ಪಾಲಿಕೆ ಸದಸ್ಯರನ್ನು ಸೇರಿಸಿ ಮೇಯರ್ ಆಯ್ಕೆಗೆ ಚುನಾವಣೆ ನಡೆಸುವುದು ಸರಿಯಲ್ಲ. ಹಾಗೆಯೇ, ಸದ್ಯದ ಸ್ಥಿತಿಯಲ್ಲಿ ಚುನಾವಣೆ ನಡೆಸಲು ನಿರ್ಧಾರ ಕೈಗೊಳ್ಳುವುದು ವಿಪತ್ತು ನಿರ್ವಹಣಾ ಕಾಯ್ದೆಯ ಸೆಕ್ಷನ್ 26ರ ಉಲ್ಲಂಘನೆ ಎಂದು ವಿವರಿಸಿದರು.
ವಾದ ಪರಿಗಣಿಸಿದ ಪೀಠ, ಮೈಸೂರಿನಲ್ಲಿ ಜೂನ್ 21ರವರೆಗೂ ಲಾಕ್ ಡೌನ್ ಇರಲಿದೆ. ಕೊರೊನಾ ಮಾರ್ಗಸೂಚಿಗಳನ್ನು ಬದಿಗಿರಿಸಿ ಮೇಯರ್ ಚುನಾವಣೆ ನಡೆಸುವುದು ಸರಿಯಾದ ಕ್ರಮವಲ್ಲ. ಹೀಗಾಗಿ ಜೂನ್ 21 ರವರೆಗೆ ಮೇಯರ್ ಆಯ್ಕೆಗೆ ಚುನಾವಣೆ ನಡೆಸಬಾರದು. ಜೂನ್ 21ರ ಬಳಿಕ ಮೇಯರ್ ಚುನಾವಣೆ ನಡೆಸಲು ಕೈಗೊಂಡಿರುವ ನಿರ್ಧಾರವನ್ನು ಮರು ಪರಿಶೀಲಿಸಿ ಸೂಕ್ತ ನಿರ್ಧಾರ ಕೈಗೊಳ್ಳಿ ಎಂದು ಮೈಸೂರು ನಗರ ಪಾಲಿಕೆ ಆಯುಕ್ತರಿಗೆ ನಿರ್ದೇಶಿಸಿ, ವಿಚಾರಣೆ ಮುಂದೂಡಿತು.