ದುಬೈ: ಸೊಂಟದ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲು ಆಸ್ಪತ್ರೆಗೆ ದಾಖಲಾಗಿದ್ದ ಭಾರತೀಯ ಮೂಲದ ಮಹಿಳೆಯೊಬ್ಬಳು ದುಬೈನಲ್ಲಿ ಮೃತಪಟ್ಟಿದ್ದಾಳೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಪ್ರಸಾರ ಮಾಡಿವೆ.
42 ವರ್ಷದ ರಿಟಾ ಫರ್ನಾಂಡಿಸ್ ಸಾವನ್ನಪ್ಪಿರುವ ದುರ್ದೈವಿ. ಸೊಂಟದ ಶಸ್ತ್ರಚಿಕಿತ್ಸೆಗಾಗಿ ದಾಖಲಾಗಿ ಕೇವಲ ಎರಡು ಗಂಟೆಯಲ್ಲೇ ಮೃತಪಟ್ಟಿದ್ದಾಳೆ. ಹಿಪ್ ಬದಲಾವಣೆಗಾಗಿ ಆಕೆ ಅಲ್ಝಜರ್ ಆಸ್ಪತ್ರೆಗೆ ಮೇ 9ರಂದು ದಾಖಲಾಗಿದ್ದಳು. ಆದರೆ, ದಾಖಲಾದ ಎರಡೇ ಗಂಟೆಯಲ್ಲಿ ಮೃತಪಟ್ಟಿರುವುದು ಅನೇಕ ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ. ಇದಕ್ಕೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಮಾಧ್ಯಮಗಳು ಸುದ್ದಿ ಪ್ರಸಾರ ಮಾಡಿವೆ ಎಂದು ತಿಳಿದು ಬಂದಿದೆ.
ಎರಡು ಮಕ್ಕಳ ತಾಯಿಯಾಗಿರುವ ಫರ್ನಾಂಡಿಸ್ ದುಬೈನಲ್ಲಿ ಅಡುಗೆ ಮಾಡುವ ಶಫ್ ಆಗಿ ಕೆಲಸ ಮಾಡುತ್ತಿದ್ದಳು. ಘಟನೆಗೆ ಸಂಬಂಧಿಸಿದಂತೆ ಇದೀಗ ಮಾತನಾಡಿರುವ ಆಸ್ಪತ್ರೆ ಅಧಿಕಾರಿ ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ನಾವು ಅವರ ಕುಟುಂಬಕ್ಕೆ ಮಾಹಿತಿ ನೀಡಿದ್ದೇವೆ ಎಂದು ತಿಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೂ ಕೂಡ ಆದೇಶ ನೀಡಲಾಗಿದ್ದು, ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಆಸ್ಪತ್ರೆ ಆಡಳಿತ ಮಂಡಳಿ ಭರವಸೆ ನೀಡಿದೆ.