ಟೌಂಟನ್: 12ನೇ ಆವೃತ್ತಿಯಲ್ಲಿ ಸೋಲೇ ಕಾಣದ 2 ತಂಡಗಳಾದ ಭಾರತ ಹಾಗೂ ನ್ಯೂಜಿಲೆಂಡ್ ನಾಳೆ ನಾಟಿಂಗ್ಹ್ಯಾಮ್ನಲ್ಲಿ ಮುಖಾಮುಖಿಯಾಗಲಿವೆ.
ವಿಶ್ವಕಪ್ನಲ್ಲಿ ಮೊದಲ ಮೂರು ಪಂದ್ಯಗಳನ್ನು ಏಷ್ಯಾದ ತಂಡಗಳ ವಿರುದ್ಧವೇ ಆಡಿರುವ ನ್ಯೂಜಿಲೆಂಡ್ ತಂಡ ಸತತ ನಾಲ್ಕನೇ ಪಂದ್ಯದಲ್ಲಿ ಏಷ್ಯಾದ ಬಲಿಷ್ಠ ತಂಡವಾದ ಭಾರತವನ್ನು ಎದುರಿಸುತ್ತಿದೆ.
ಮೊದಲ ಪಂದ್ಯದಲ್ಲಿ ಶ್ರೀಲಂಕಾವನ್ನು ಕೇವಲ 136 ರನ್ಗಳಿಗೆ ಆಲೌಟ್ ಮಾಡಿ 10 ವಿಕೆಟ್ಗಳಿಂದ ಜಯ ಸಾಧಿಸಿತ್ತು. ನಂತರ ಬಾಂಗ್ಲಾದೇಶದ ವಿರುದ್ಧ 2 ವಿಕೆಟ್ಗಳ ರೋಚಕ ಜಯ ಸಾಧಿಸಿದರೆ, ಅಫ್ಘಾನಿಸ್ತಾನದ ವಿರುದ್ಧ 7 ವಿಕೆಟ್ಗಳ ಗೆಲುವು ಗಳಿಸಿ ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ.
ಗಪ್ಟಿಲ್, ಮನ್ರೋ,ವಿಲಿಯಮ್ಸನ್ ಹಾಗೂ ಟೇಲರ್ ಬ್ಯಾಟಿಂಗ್ ವಿಭಾಗದ ಶಕ್ತಿಗಳಾಗಿದ್ದರೆ, ಕಳೆದ ಮೂರು ಪಂದ್ಯಗಳಲ್ಲಿ ಟ್ರೆಂಟ್ ಬೌಲ್ಟ್, ಮ್ಯಾಟ್ ಹೆನ್ರಿ ಹಾಗೂ ನಿಶಾಮ್ ಬೌಲಿಂಗ್ನಲ್ಲಿ ಮಿಂಚಿದ್ದಾರೆ. ಅಭ್ಯಾಸ ಪಂದ್ಯದಲ್ಲಿ ಭಾರತವನ್ನು ಮಣಿಸಿದ ವಿಶ್ವಾಸದಲ್ಲಿರುವ ಕಿವೀಸ್ ನಾಳಿನ ಪಂದ್ಯದಲ್ಲೂ ಗೆಲುವು ಪಡೆಯುವ ನಿರೀಕ್ಷೆಯಲ್ಲಿದೆ.
ಭಾರತ ಮೊದಲ ಎರಡು ಪಂದ್ಯಗಳಲ್ಲಿ ದಕ್ಷಿಣ ಆಫ್ರಿಕಾ ಹಾಗೂ ಆಸ್ಟ್ರೇಲಿಯ ತಂಡವನ್ನು ಬಗ್ಗುಬಡಿದಿದೆ. ನಾಳಿನ ಪಂದ್ಯದಲ್ಲಿ ಕಿವೀಸ್ ವಿರುದ್ಧವೂ ಗೆಲ್ಲುವ ನೆಚ್ಚಿನ ತಂಡವಾಗಿದ್ದು, ಧವನ್ ಅನುಪಸ್ಥಿತಿ ತಂಡವನ್ನು ಕೊಂಚ ಕಾಡಲಿದೆ. ಇನ್ನುಳಿದಂತೆ ಕಳೆದ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿರುವ ರೋಹಿತ್, ಕೊಹ್ಲಿ, ಬುಮ್ರಾ, ಚಹಾಲ್, ಭುವನೇಶ್ವರ್ ಹಾಗೂ ಧೋನಿ ಕಿವೀಸ್ ವಿರುದ್ಧವೂ ತಮ್ಮ ಫಾರ್ಮ್ ಮುಂದುವರಿಸಲು ಕಾತರದಿಂದಿದ್ದಾರೆ.
ವಿಶ್ವಕಪ್ ಮುಖಾಮುಖಿ:
ಭಾರತದ ವಿರುದ್ಧ 7 ಪಂದ್ಯಗಳನ್ನಾಡಿರುವ ಕಿವೀಸ್ 1975,1979,1992, ಹಾಗೂ 1999ರ ವಿಶ್ವಕಪ್ನಲ್ಲಿ ಜಯ ಸಾಧಿಸಿದ್ದರೆ, ಭಾರತ ತಂಡ 1987ರಲ್ಲಿ 2 ಬಾರಿ ಹಾಗೂ 2003ರಲ್ಲಿ ಒಮ್ಮೆ ನ್ಯೂಜಿಲೆಂಡ್ ತಂಡವನ್ನು ಮಣಿಸಿದೆ. 2003ದಿಂದೀಚೆಗೆ ಇದೇ ಮೊದಲ ಬಾರಿಗೆ ಇತ್ತಂಡಗಳು ಮುಖಾಮುಖಿಯಾಗುತ್ತಿವೆ.
ಸಂಭಾವ್ಯ ತಂಡಗಳ ವಿವರ
ಭಾರತ:
ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ(ನಾಯಕ), ಕೆ ಎಲ್ ರಾಹುಲ್, ಎಂ ಎಸ್ ಧೋನಿ, ಕೇದಾರ್ ಜಾಧವ್, ಹಾರ್ದಿಕ್ ಪಾಂಡ್ಯ, ಭುವನೇಶ್ವರ್ ಕುಮಾರ್, ಕುಲ್ದೀಪ್ ಯಾದವ್, ಯಜ್ವೇಂದ್ರ ಚಹಾಲ್, ಜಸ್ಪ್ರೀತ್ ಬುಮ್ರಾ, ವಿಜಯ್ ಶಂಕರ್
ನ್ಯೂಜಿಲೆಂಡ್:
ಕೇನ್ ವಿಲಿಯಮ್ಸನ್ (ನಾಯಕ), ಟ್ರೆಂಟ್ ಬೌಲ್ಟ್, ಕಾಲಿನ್ ಡಿ ಗ್ರ್ಯಾಂಡ್ಹೋಮ್, ಲೂಕಿ ಫರ್ಗ್ಯುಸನ್, ಮಾರ್ಟಿನ್ ಗಪ್ಟಿಲ್, ಮ್ಯಾಟ್ ಹೆನ್ರಿ, ಟಾಮ್ ಲಾಥಮ್, ಕಾಲಿನ್ ಮನ್ರೊ, ಜಿಮ್ಮಿ ನಿಶಾಮ್, ಮಿಚೆಲ್ ಸ್ಯಾಂಟ್ನರ್, ರಾಸ್ ಟೇಲರ್.