ದಾವಣಗೆರೆ: ಯಾವ ಸಮಾಜ, ಧರ್ಮವನ್ನ ನಾನು ಅವಹೇಳನ ಮಾಡಿಲ್ಲ. ಆದರೂ ನನ್ನ ವಿರುದ್ಧ ಕೆಲವರು ಪಿತೂರಿ ನಡೆಸಿದ್ದಾರೆ. ಈ ಬಗ್ಗೆ ಈಗಾಗಲೇ ದೂರು ನೀಡಿದ್ದೇನೆ. ನನ್ನ ವಿರುದ್ಧದ ಪ್ರತಿಭಟನೆ ವೇಳೆ ಅವಾಚ್ಯ ಶಬ್ಧಗಳಿಂದ ನಿಂದಿಸಿದವರನ್ನು ಕೂಡಲೇ ಬಂಧಿಸಬೇಕು ಎಂದು ಕಾಂಗ್ರೆಸ್ ಮುಖಂಡ ರಾಮಪ್ಪ ಒತ್ತಾಯಿಸಿದ್ದಾರೆ.
ದಾವಣಗೆರೆ ವರದಿಗಾರರ ಕೂಟದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ವಿಚಾರವಾಗಿ ಸಿರಿಗೆರೆ ಶ್ರೀ ಸೇರಿದಂತೆ ಯಾವ ಸ್ವಾಮೀಜಿ ಕಾಲಿಗೂ ನಾನು ಬೀಳುವುದಿಲ್ಲ ಹಾಗೂ ಕ್ಷಮೆ ಕೇಳುವುದಿಲ್ಲ. ನಾನು ಯಾವ ತಪ್ಪು ಮಾಡಿಲ್ಲ. ಯಾವ ಸಮುದಾಯವನ್ನು ನಿಂದಿಸಿಲ್ಲ. ಯಾಕೆ ಕ್ಷಮೆ ಕೇಳಬೇಕು ಅಂತಾ ಗೊತ್ತಾಗುತ್ತಿಲ್ಲ. ಈಗಾಗಲೇ 12 ಮಂದಿ ವಿರುದ್ಧ ಜಾತಿ ನಿಂದನೆ, ಜೀವ ಬೆದರಿಕೆ, ಮಾನಸಿಕ ಹಿಂಸೆ ಸೇರಿದಂತೆ ಹಲವು ಸೆಕ್ಷನ್ ಅಡಿ ದೂರು ನೀಡಿದ್ದೇನೆ. ಇನ್ನೂ ಕೆಲವರು ಇದ್ದು, ಅವರ ವಿರುದ್ಧವೂ ಎಸ್ಪಿಗೆ ದೂರು ಕೊಡುತ್ತೇನೆ ಎಂದರು.
ಇದೇ ವೇಳೆ ಮಾಜಿ ಶಾಸಕ ಬಸವರಾಜ ನಾಯ್ಕ್, ಅಣಬೇರು ಶಿವಮೂರ್ತಿ, ಜಿಲ್ಲಾ ಬಿಜೆಪಿ ಅಧ್ಯಕ್ಷ ಯಶವಂತ ರಾವ್ ಜಾಧವ್ ವಿರುದ್ಧ ವಾಗ್ದಾಳಿ ನಡೆಸಿದ ರಾಮಪ್ಪ, ಪ್ರತಿಭಟನೆ ವೇಳೆ ನನ್ನ ಬಗ್ಗೆ ಅವಹೇಳನ ಮಾಡುವಾಗ, ಅಶ್ಲೀಲ ಪದಗಳಿಂದ ನಿಂದಿಸುವಾಗ ಇವರೆಲ್ಲಾ ಎಲ್ಲಿ ಹೋಗಿದ್ದರು. ಈಗ ಬಂದು ನಾನು ಕ್ಷಮೆಯಾಚಿಸಬೇಕು ಎಂದು ಒತ್ತಾಯ ಮಾಡುತ್ತಿದ್ದಾರೆ. ಹಾಗಿದ್ದರೆ ಇವರು ಮೊದಲು ಪ್ರತಿಭಟನೆ ನಡೆಸಿ, ನನ್ನ ತೇಜೋವಧೆ ಮಾಡಿದವರಿಗೆ ಬುದ್ಧಿವಾದ ಹೇಳಲಿ ಎಂದು ತಿರುಗೇಟು ನೀಡಿದರು.
ನನ್ನ ಕಾಲೇಜಿನ ಮೇಲೆ ಕಲ್ಲು ತೂರಾಟ ಆದ ಬಗ್ಗೆ ನಮ್ಮವರೇ ಮಾಡಿದ್ದಾರೆ ಎಂಬ ಆರೋಪ ಮಾಡುತ್ತಿದ್ದಾರೆ. ನನಗೆ ಅಷ್ಟು ತಿಳುವಳಿಕೆ ಇಲ್ಲವೇ. ನನ್ನ ಕಾಲೇಜಿನ ಮೇಲೆ ದಾಳಿ ಮಾಡಿಸಿ ನಾನು ಇಲ್ಲಿಗೆ ಬರಲು ಸಾಧ್ಯವಾಗುತ್ತಾ. ಇಂಥ ಆರೋಪಗಳನ್ನು ಮಾಡುವುದು ಸರಿಯಲ್ಲ. ನಾನು ಎಲ್ಲಾ ಸಮಾಜದವರ ಜೊತೆ ಚೆನ್ನಾಗಿದ್ದೇನೆ. ಜಾತಿ ಜಾತಿಗಳ ನಡುವೆ ವಿಷ ಬೀಜ ಬಿತ್ತುವ ಕೆಲಸ ಮಾಡುತ್ತಿಲ್ಲ. ಈ ಅವಶ್ಯಕತೆ ನನಗಿಲ್ಲ. ನನ್ನ ಸ್ವಾಭಿಮಾನಕ್ಕೋಸ್ಕರ ಪ್ರತಿಕ್ರಿಯೆ ನೀಡುತ್ತಿದ್ದೇನೆ. ತಪ್ಪು ಮಾಡದಿದ್ದರೂ ಯಾಕೆ ಆರೋಪ ಎದುರಿಸಬೇಕು ಎಂದು ಪ್ರಶ್ನಿಸಿದರು.