ಹಾಸನ: ಹಾಸನ ಲೋಕಸಭಾ ಕ್ಷೇತ್ರದ ನೂತನ ಸಂಸದ ಪ್ರಜ್ವಲ್ ರೇವಣ್ಣ ತಮ್ಮ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಹೇಳಿಕೆ ನೀಡಿದ್ದಾರೆ.
ಹಾಸನದ ಖಾಸಗಿ ಹೋಟೆಲ್ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾತನ ಸೋಲಿನಿಂದಾಗಿ ಈ ರಾಜೀನಾಮೆಯನ್ನು ನೀಡಲು ಇಚ್ಛಿಸಿದ್ದೇನೆ. ಅವರನ್ನು ಇಲ್ಲಿಂದ ಗೆಲ್ಲಿಸಿ ವಿಜಯೋತ್ಸವ ಮಾಡಿಕೊಂಡು ಹೋಗುತ್ತೇನೆ ಎಂದು ಪ್ರಕಟಿಸಿದ್ದಾರೆ.
ಹಾಸನ ಲೋಕಸಭಾ ಕ್ಷೇತ್ರವನ್ನು ತಾತನಿಗೆ ಬಿಟ್ಟುಕೊಡುವೆ. ಇಂದು ಮಧ್ಯಾಹ್ನ ಬೆಂಗಳೂರಿನ ದೇವೇಗೌಡರ ನಿವಾಸದಲ್ಲಿ ಅವರನ್ನು ಭೇಟಿ ಮಾಡುತ್ತೇನೆ. ಇದನ್ನು ಪ್ರೀತಿಯಿಂದ ಹೇಳುತ್ತಿದ್ದೇನೆ. ತಾತ ನನ್ನ ತೀರ್ಮಾನವನ್ನು ಸ್ವೀಕರಿಸಬೇಕು ಎಂದು ಇದೇ ವೇಳೆ ಮನವಿ ಮಾಡಿದರು.
ದೇವೇಗೌಡರಿಗೆ ಶಕ್ತಿ ತುಂಬಲು ನಾನು ತೆಗೆದುಕೊಂಡ ಸ್ವಂತ ನಿರ್ಧಾವಿದು. ನನ್ನ ತಾತನಿಗೆ ಮತ್ತೆ ಶಕ್ತಿ ತುಂಬಲು ರಾತ್ರಿಯೆಲ್ಲಾ ಯೋಚನೆ ಮಾಡಿ ಈ ತೀರ್ಮಾನ ತೆಗೆದುಕೊಂಡಿದ್ದೇನೆ. ಇದರಿಂದ ಹಾಸದ ಜನತೆ ತಪ್ಪು ತಿಳಿಯಬಾರದು ಎಂದರು.
ಜೆಡಿಎಸ್ ಪಾಳಯದಲ್ಲಿ ಒಂದೆಡೆ ಸಂತೋಷ, ಮತ್ತೊಂದೆಡೆ ಬೇಸರ ಇದೆ. ಜಿಲ್ಲೆಯ ಜನರು ನನ್ನ ಗೆಲ್ಲಿಸಿರುವುದಕ್ಕೆ ಪ್ರತಿಯೊಬ್ಬರಿಗೂ ಕೃತಜ್ಞತೆಗಳು. ಜೆಡಿಎಸ್ ಹಾಗೂ ಕಾಂಗ್ರೆಸ್ ನ ಎಲ್ಲರೂ ನಮಗೆ ಶಕ್ತಿ ತುಂಬಿದ್ದಾರೆ. ಅವರಿಗೂ ಧನ್ಯವಾದ ಹೇಳುವೆ. ಇದು ಪ್ರಜ್ವಲ್ ರೇವಣ್ಣ ಗೆಲುವಲ್ಲ ನನ್ನ ಜಿಲ್ಲೆಯ ಜನತೆಯ ಗೆಲುವು. ಉಭಯ ಪಕ್ಷಗಳ ಕಾರ್ಯಕರ್ತರು ಹೋರಾಟ ಮಾಡಿ ಗೆಲ್ಲಿಸಿದ್ದಾರೆ. ಇದು ಕಾರ್ಯಕರ್ತರು ಮತ್ತು ದೇವೇಗೌಡರ ಗೆಲುವು ಎಂದು ಹೇಳಿದರು.
ದೇವೇಗೌಡರು ಸೋತಿರುವುದಕ್ಕೆ ದುಃಖ ಆಗುತ್ತಿದೆ. ರಾಜಕೀಯ ಹೋರಾಟವೇ ಜೀವನ ಎಂದುಕೊಂಡಿದ್ದ ಗೌಡರಿಗೆ ಆಕಸ್ಮಿಕ ಸೋಲಾಗಿದೆ. ತುಮಕೂರಿಗೆ ಹೇಮಾವತಿ ನೀರು ಕೊಟ್ಟಿದ್ದು ದೇವೇಗೌಡರು. ಆದರೂ ಕೆಲ ವಿರೋಧಿಗಳು ಅಪ ಪ್ರಚಾರ ಮಾಡಿದರು. ತುಮಕೂರಿನ ಎರಡೂ ಪಕ್ಷಗಳ ನಾಯಕರು, ಮತದಾರರಿಗೆ ಕೃತಜ್ಞತೆಗಳನ್ನು ಪ್ರಜ್ವಲ್ ರೇವಣ್ಣ ತಿಳಿಸಿದರು.
ನಿನ್ನೆ 1.42ಲಕ್ಷ ಮತಗಳ ಅಂತರದಿಂದ ಜಯಭೇರಿ ಬಾರಿಸಿದ್ದ ಪ್ರಜ್ವಲ್ ರೇವಣ್ಣ, ಇಂದು ರಾಜೀನಾಮೆ ನೀಡುವುದಾಗಿ ಹೇಳಿಕೆ ನೀಡಿದ್ದಾರೆ.