ಬಳ್ಳಾರಿ: ಜಿಲ್ಲೆಯ ಹೊಸಪೇಟೆಯಲ್ಲಿ ನಿನ್ನೆ ಸಂಜೆ ಭಾರಿ ಮಳೆ ಸುರಿದಿದ್ದು, ಸಂಚಾರಕ್ಕೆ ಅಡ್ಡಿಯುಂಟಾಗಿದೆ. ತಗ್ಗು ಪ್ರದೇಶದ ಕೆಲ ಮನೆಗಳು, ಸರ್ಕಾರಿ ಕಚೇರಿಗಳಲ್ಲಿ ಮಳೆ ನೀರು ನುಗ್ಗಿದ ಪರಿಣಾಮ ಜನಜೀವನ ಅಸ್ತವ್ಯಸ್ತಗೊಂಡಿದೆ.
ನಿನ್ನೆ ಸಂಜೆ 4 ಗಂಟೆ ಸುಮಾರಿಗೆ ಆರಂಭವಾದ ಮಳೆ 8 ಗಂಟೆಯವರೆಗೆ ಸುರಿದಿದೆ. ಭಾರಿ ವರ್ಷಧಾರೆಯಿಂದ ಹೊಸಪೇಟೆ ನಗರದ ಪ್ರಮುಖ ರಸ್ತೆಗಳು ಕೂಡ ಜಲಾವೃತಗೊಂಡಿವೆ. ಚರಂಡಿಗಳು ತುಂಬಿ ಹರಿದ ಪರಿಣಾಮ ತ್ಯಾಜ್ಯ ರಸ್ತೆಗೆ ಬಂದಿದೆ.
ಹೊಸಪೇಟೆ ನಗರದ ಚಪ್ಪರದಹಳ್ಳಿ, ಬಸವೇಶ್ವರ ಬಡಾವಣೆ, ಚಿತ್ತವಾಡಿಗಿ, ಪಟೇಲ್ ನಗರ, ಶಿರಸಿನಕಲ್ಲು ಬಡಾವಣೆ, ಬಳ್ಳಾರಿ ರಸ್ತೆ, ಹಂಪಿ ರಸ್ತೆಯಲ್ಲೂ ಭಾರೀ ಪ್ರಮಾಣದ ಮಳೆಯಾಗಿದೆ. ಚಪ್ಪರದಹಳ್ಳಿ ಹಾಗೂ ರಾಣಿಪೇಟೆಯಲ್ಲಿ ಮಳೆಯ ನೀರಿನೊಂದಿಗೆ ವಿಜಯನಗರ ಉಪಕಾಲುವೆಯ ನೀರು ಹರಿದಿದ್ದರಿಂದ ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಸಿತ್ತು.
ಹೊಸಪೇಟೆ ತಾಲೂಕಿನ ಹಂಪಿ, ಕಮಲಾಪುರ, ಸೀತಾರಾಮ ತಾಂಡಾ, ನಲ್ಲಾಪುರ, ಚಿನ್ನಾಪುರ, ಬೈಲುವದ್ದಿಗೇರಿ, ರಾಮಸಾಗರ, ಧರ್ಮಸಾಗರ, ವಡ್ಡರಹಳ್ಳಿ, ಹೊಸೂರು, ಮಲಪನಗುಡಿ, ಹೊಸಮಲಪನಗುಡಿ, ನಾಗೇನಹಳ್ಳಿ, ಬಸವನ ದುರ್ಗ, ಕಡ್ಡಿರಾಂಪುರ, ಪಾಪಿನಾಯಕನ ಹಳ್ಳಿ ಸೇರಿ ಹಲವೆಡೆ ಉತ್ತಮ ಮಳೆ ಆಗಿರುವ ಕುರಿತು ವರದಿಯಾಗಿದೆ.