ಸುರಪುರ (ಯಾದಗಿರಿ) : ಇಂದು ವರ್ತಕರ ಜೊತೆ ಗ್ರೇಡ್-2 ತಹಶೀಲ್ದಾರ್ ಸೂಫಿಯಾ ಸುಲ್ತಾನ್ ಅವರು ಸಭೆ ನಡೆಸಿದ್ದು, ಕೊರೊನಾ ನಿಯಂತ್ರಣ ಸಂಬಂಧಿ ನಿಯಮಗಳನ್ನು ಪಾಲಿಸುವಂತೆ ಸೂಚಿಸಿದರು.
ತಹಶೀಲ್ದಾರ್ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ವರ್ತಕರು ಕೊರೊನಾ ವಾರಿಯರ್ಸ್‌ಗಳಾಗಿ ಕೆಲಸ ಮಾಡಬೇಕು. ಈ ಮಹಾಮಾರಿ ಸಮುದಾಯ ಮಟ್ಟದಲ್ಲಿ ಹರಡದಂತೆ ತಡೆಯುವುದು ಜನರ ಕೈಯಲ್ಲಿದೆ. ಅದರಂತೆ ವರ್ತಕರು, ಗ್ರಾಹಕರಿಗೆ ಮಾಸ್ಕ್ ಹಾಕುವಂತೆ ಹಾಗೂ ಸ್ಯಾನಿಟೈಸರ್ ಮತ್ತು ಪರಸ್ಪರ ಅಂತರ ಕಾಯ್ದುಕೂಳ್ಳುವಂತೆ ಜಾಗೃತಿ ಮೂಡಿಸುವುದು ಅಗತ್ಯ ಎಂದರು.
ಬಳಿಕ ನಗರಸಭೆ ಪೌರಾಯುಕ್ತ ಜೀವನ್ ಕುಮಾರ್ ಮಾತನಾಡಿ, ನಗರದ ಬಹುತೇಕ ಅಂಗಡಿಗಳಲ್ಲಿ ಜನದಟ್ಟನೆಯಾಗಿ ಪರಸ್ಪರ ಅಂತರ ಕಾಯ್ದುಕೊಳ್ಳದಿರುವುದು ಕಂಡು ಬಂದಿದೆ. ಇಂತಹ ಪ್ರಕರಣ ಮತ್ತೆ ಮತ್ತೆ ನಡೆದ್ರೆ ವರ್ತಕರ ಮೇಲೆ ನಿರ್ದಾಕ್ಷಣ್ಯವಾಗಿ ಕ್ರಮ ಜರುಗಿಸಿ ದಂಡ ವಿಧಿಸಲಾಗುವುದು ಎಂದು ತಿಳಿಸಿದರು.
ಜನದಟ್ಟಣೆ ತಡೆಯುವುದು ಅಸಾಧ್ಯ. ಇಲಾಖೆಯವರು ಮಾರುಕಟ್ಟೆ ಬರುವ ಜನರನ್ನು ಒಬ್ಬೊಬ್ಬರೇ ಬರುವಂತೆ ವ್ಯವಸ್ಥೆ ಮಾಡಿದ್ರೆ ಪರಸ್ಪರ ಅಂತರ ಕಾಪಾಡಬಹುದಾಗಿದೆ ಎಂದು ವರ್ತಕರು ಅಭಿಪ್ರಾಯ ವ್ಯಕ್ತಪಡಿಸಿದರು. ಸಭೆಯಲ್ಲಿ ಪಿಎಸ್ಐ ಚಂದ್ರಶೇಖರ್ ನಾರಾಯಣಪುರ ಸೇರಿ ನಗರದ ಎಲ್ಲಾ ವರ್ತಕರು ಭಾಗಿಯಾಗಿದ್ದರು.