ನವದೆಹಲಿ: ಕಪ್ಪು ಹಣ ಚಲಾವಣೆ ತಡೆಯುವ ಹಾಗೂ ನೋಟುಗಳ ಬಳಕೆಯನ್ನು (ಪೇಪರ್ ಕರೆನ್ಸಿ) ತಗ್ಗಿಸುವ ಉದ್ದೇಶದಿಂದ ವಾರ್ಷಿಕ ನಗದು ಹಿಂತೆಗೆತಕ್ಕೆ ನಿರ್ದಿಷ್ಟ ಮೊತ್ತ ನಿಗದಿಪಡಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸುತ್ತಿದೆ.
ವರ್ಷಕ್ಕೆ ಬ್ಯಾಂಕ್ಗಳಿಂದ ನಗದು ಸ್ವೀಕೃತಿಯನ್ನು ₹ 10 ಲಕ್ಷಕ್ಕೆ ನಿಗದಿಪಡಿಸಿ ಹೆಚ್ಚುವರಿ ನಗದು ಹಿಂತೆಗೆತದ ಮೇಲೆ ತೆರಿಗೆ ವಿಧಿಸುವ ಕುರಿತು ಯೋಜನೆ ಹಾಕಿಕೊಂಡಿದೆ. ಡಿಜಿಟಲ್ ಪಾವತಿ ಅಥವಾ ಆನ್ಲೈನ್ ಮುಖಾಂತರ ಹಣ ವರ್ಗಾವಣೆ ಕ್ರಮಗಳನ್ನು ಉತ್ತೇಜಿಸಲು ಈ ಕ್ರಮಕ್ಕೆ ಮುಂದಾಗಿದೆ ಎಂದು ಹೇಳಲಾಗುತ್ತಿದೆ.
ವೈಯಕ್ತಿಕವಾಗಿ ಬಹುತೇಕ ಮಂದಿಗೆ ವಾರ್ಷಿಕ ₹ 10 ಲಕ್ಷಕ್ಕೂ ಅಧಿಕ ಮೊತ್ತದ ನಗದು ಹಿಂತೆಗೆತದ ಅಗತ್ಯ ಇರುವುದಿಲ್ಲ. ಹೆಚ್ಚಿನ ಮೊತ್ತದ ನಗದು ಹಿಂತೆಗೆತವು ದೃಢೀಕರಣ ಹಾಗೂ ಆಧಾರ್ ಕಡ್ಡಾಯಗೊಳಿಸುವಿಕೆಯ ಬಗ್ಗೆ ಸರ್ಕಾರ ಭಾವಿಸಿದೆ ಎಂದು ವರದಿಯಾಗಿದೆ.
ಈ ನಡೆಯಿಂದ ವ್ಯಕ್ತಿಗಳ ಆದಾಯ ತೆರಿಗೆ ವಿವರಕ್ಕೂ ಖರ್ಚು ವೆಚ್ಚಗಳಿಗೂ ಹೋಲಿಕೆ ಮಾಡುವುದು ಸುಲಭವಾಗಲಿದೆ ಎಂಬ ಸ್ಪಷ್ಟನೆ ಇದೆ. ಜೊತೆಗೆ ಇಂತಹ ಕ್ರಮದಿಂದ ಬಡ ಮತ್ತು ಮಧ್ಯಮ ವರ್ಗದ ಜನತೆಗೆ ತೊಂದರೆ ಆಗಬಾರದು ಎಂಬ ಎಚ್ಚರಿಕೆಯೂ ಸರ್ಕಾರಕ್ಕೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.