ಬಳ್ಳಾರಿ: ಇಲ್ಲಿನ ರೈತ ಸಂಘದ ಜಿಲ್ಲಾ ಘಟಕದಿಂದ ಹಮ್ಮಿಕೊಂಡಿರುವ 3ನೇ ವರ್ಷದ ಹೂಳಿನ ಜಾತ್ರೆಯು ಎರಡನೇ ದಿನಕ್ಕೆ ಕಾಲಿರಿಸಿದೆ.
ಗದುಗಿನ ವೀರೇಶ್ವರ ಪುಣ್ಯಾಶ್ರಮದ ಪೀಠಾಧ್ಯಕ್ಷ ಕಲ್ಲಯ್ಯಜ್ಜನವರು ಹೂಳೆತ್ತುವ ಜಾತ್ರೆಯ ಭಾಗಿವಾಗಿ ಹೂಳೆತ್ತುವ ಕಾರ್ಯದ ಕುರಿತು ಪ್ರಶಂಸೆ ವ್ಯಕ್ತಪಡಿಸಿದರು.
ಗುರುವಾರದಿಂದ ಸುಮಾರು 25ಕ್ಕೂ ಅಧಿಕ ಟ್ರ್ಯಾಕ್ಟರ್ಗಳಲ್ಲಿ ಹೂಳೆತ್ತುವ ಕೆಲಸ ನಡೆದಿದೆ. ಜಿಲ್ಲೆಯ ನೂರಾರು ರೈತರು ಇದರಲ್ಲಿ ಪಾಲ್ಗೊಂಡಿದ್ದಾರೆ. ತುಂಗಭದ್ರ ಜಲಾಶಯದ ಹಿನ್ನೀರಿನ ಪ್ರದೇಶದಲ್ಲಿ (ಗೋಂಡಾರಣ್ಯ) 2 ಜೆಸಿಬಿ ಸ್ಥಳದಲ್ಲೇ ಬೀಡು ಬಿಟ್ಟಿವೆ. ಜಲಾಶಯದ ಒಂದು ಮೂಲೆಯಲ್ಲಿ ಹೂಳೆತ್ತುವ ಕಾರ್ಯ ನಡೆದಿದೆ. ನೂರಾರು ರೈತರು ಹಗಲು, ರಾತ್ರಿ ಎನ್ನದೇ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ರೈತ ಸಂಘದ ದರೂರು ಪುರುಷೋತ್ತಮ ಗೌಡ ಹೇಳಿದರು.
ಜಿಲ್ಲೆಯ ರೈತರ ಜೀವನಾಡಿಯಾಗಿರುವ ತುಂಗಭದ್ರಾ ಜಲಾಶಯಕ್ಕೆ ಹೂಳಿನ ಕಂಟಕ ಶುರುವಾಗಿದೆ. ಸಮರ್ಪಕ ನೀರು ಜಲಾಶಯದಲ್ಲಿ ಭರ್ತಿಯಾದರೆ ರೈತಾಪಿ ವರ್ಗ ಸಂವೃದ್ಧಿಯಾಗಲಿದೆ. ಹೀಗಾಗಿ, ಹೂಳಿನ ಜಾತ್ರೆಯನ್ನ ಸತತ ಮೂರು ವರ್ಷಗಳಿಂದ ತುಂಗಭದ್ರಾ ರೈತ ಸಂಘದಿಂದ ಹಮ್ಮಿಕೊಂಡಿರುವುದು ಸ್ವಾಗತಾರ್ಹ ಎಂದು ರೈತರನ್ನು ಉದ್ದೇಶಿಸಿ ಕಲ್ಲಯ್ಯಜ್ಜನವರು ಮಾತನಾಡಿದರು.
ರೈತರ ಹೂಳಿನ ಜಾತ್ರೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೈಜೋಡಿಸಬೇಕು. ಅಗತ್ಯ ಅನುದಾನವನ್ನು ಬಜೆಟ್ನಲ್ಲಿ ಮೀಸಲಿರಿಸಬೇಕು. ಈ ಜಲಾಶಯದಲ್ಲಿ ತುಂಬಿರುವ ಹೂಳನ್ನು ತೆರವುಗೊಳಿಸಬೇಕು ಎಂದರು.