ಚಿಕ್ಕೋಡಿ: ಬೆಳಗಾವಿ ಜಿಲ್ಲೆಯ ಯಮಕನಮರಡಿ ಪೊಲೀಸ್ ಠಾಣೆಯ ಬಳಿ ಕಾರಿನಲ್ಲಿದ್ದ 4 ಕೆಜಿ 900 ಗ್ರಾಂ ಚಿನ್ನ ಕಳ್ಳತನ ಪ್ರಕರಣದ ಜಾಡು ಹಿಡಿದಿರುವ ಸಿಒಡಿ ಪೊಲೀಸರು, ಇಂದು ಕಿಂಗ್ಪಿನ್ ಕಿರಣ್ ಎಂಬಾತನನ್ನು ಬಂಧಿಸಿದ್ದಾರೆ. ಇಂದು ಬೆಳಗ್ಗೆಯಿಂದ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸಂಕೇಶ್ವರ ಪೊಲೀಸ್ ಠಾಣೆಯಲ್ಲಿ ವಿಚಾರಣೆ ನಡೆಲಾಗುತ್ತಿದೆ.
ಸುಮಾರು 3 ರಿಂದ ನಾಲ್ಕು ಜನ ಸಿಒಡಿ ಅಧಿಕಾರಿಗಳು ಸಂಕೇಶ್ವರಕ್ಕೆ ಭೇಟಿ ನೀಡಿದ್ದು, ಪ್ರಕರಣಕ್ಕೆ ಸಂಬಂಧಿಸಿದವರನ್ನು ವಿಚಾರಣೆಗೆ ಒಳಪಡಿಸಿಲಾಗುವುದು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಸಂಕೇಶ್ವರ ಪೊಲೀಸ್ ಠಾಣೆಯಲ್ಲಿ ಸತತ ಹಲವು ಗಂಟೆಗಳ ಕಾಲ ಕಿರಣ್ನನ್ನು ಸಿಒಡಿ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.
ಘಟನೆ ಹಿನ್ನೆಲೆ: ಯಮಕನಮರಡಿಯ ಠಾಣಾ ವ್ಯಾಪ್ತಿಯ ಹತ್ತರಗಿ ಟೋಲ್ ನಾಕಾ ಬಳಿ ಏಪ್ರಿಲ್ 9ರಂದು ರಾತ್ರಿ ಅಂದಿನ ಯಮಕನಮರಡಿ ಪಿಎಸ್ಐ ಆಗಿದ್ದ ರಮೇಶ್ ಪಾಟೀಲ್ ಹಾಗೂ ಸಿಬ್ಬಂದಿ ಮಂಗಳೂರು ಮೂಲದ ತಿಲಕ್ ಪೂಜಾರ ಎನ್ನುವರಿಗೆ ಸೇರಿದ್ದ ಕಾರನ್ನು ವಶಕ್ಕೆ ಪಡೆದು ಕೇಸು ದಾಖಲಿಸಿದ್ದರು. ಆ ಕಾರಿನಲ್ಲಿ ಸಾಗಿಸುತ್ತಿದ್ದ 4 ಕೆಜಿ 900 ಗ್ರಾಂ ಚಿನ್ನವನ್ನು ಯಮಕನಮರಡಿ ಪೊಲೀಸರಿಗೆ ತಿಳಿಯದ ಹಾಗೇ ಪೊಲೀಸ್ ಮೇಲಾಧಿಕಾರಿಗಳ ಸಹಕಾರದಿಂದ ಕಿಂಗ್ ಪಿನ್ ಕಿರಣ್ ಎಗರಿಸಿದ್ದ ಎಂಬ ಆರೋಪವಿದೆ.
ಈ ಪ್ರಕರಣವನ್ನು ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷಣ ನಿಂಬರಗಿ ಕೈಗೆತ್ತಿಕೊಂಡರು. ಈ ವೇಳೆ ಪ್ರಕರಣದಲ್ಲಿ ಕೆಲವು ಪೊಲೀಸ್ ಮೇಲಾಧಿಕಾರಿಗಳು ಶಾಮೀಲಾಗಿರುವ ಬಗ್ಗೆ ಸಂಶಯ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಕಳ್ಳತನ ಪ್ರಕರಣದ ವಿಚಾರಣೆಯನ್ನು ಸಿಒಡಿಗೆ ವಹಿಸುವಂತೆ ಎಸ್ ಪಿ ನಿಂಬರಗಿ ಅವರು ಇಲಾಖೆಗೆ ಹಾಗೂ ಸರ್ಕಾರಕ್ಕೆ ಮನವಿ ಮಾಡಿದ್ದರು. ಹೀಗಾಗಿ ಸರ್ಕಾರ ಈ ಕೇಸನ್ನೂ ಸಿಒಡಿಗೆ ಒಪ್ಪಿಸಿದ್ದು, ಅಧಿಕಾರಿಗಳು ಕಿರಣ್ ಎಂಬ ವ್ಯಕ್ತಿಯನ್ನು ಬಂಧಿಸಿ ಸಂಕೇಶ್ವರ ಪೊಲೀಸ್ ಠಾಣೆಯಲ್ಲಿ ವಿಚಾರಣೆ ನಡೆಸುತ್ತಿದ್ದಾರೆ.