ಕಾರವಾರ: ಗೋವಾ ಮದ್ಯವನ್ನು ಅಕ್ರಮವಾಗಿ ತಂದು ಮನೆಯಲ್ಲಿ ದಾಸ್ತಾನು ಮಾಡಿದ್ದರ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ಕಾರ್ಯಾಚರಣೆ ನಡೆಸಿ ಬರೊಬ್ಬರಿ 2.95 ಲಕ್ಷ ರೂ ಮದ್ಯವನ್ನು ವಶಕ್ಕೆ ಪಡೆದಿರುವ ಘಟನೆ ಜೊಯಿಡಾ ತಾಲೂಕಿನ ರಾಮನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ರಾಮನಗರದ ನಾಗಾನಾಥ ಗಲ್ಲಿಯ ಮೌಂಟ ಕಾರ್ಮೇಲ್ ಹೋಗುವ ರಸ್ತೆಯ ಪಕ್ಕದಲ್ಲಿ ಮನೋಹರ ಶೇಲಾರ ಎಂಬಾತ ತನ್ನ ಮನೆಯ ಎದುರುಗಡೆ ಗೋವಾ ಸರಾಯಿ ಅಕ್ರಮವಾಗಿ ದಾಸ್ತಾನು ಮಾಡಿದ ಬಗ್ಗೆ ಪೊಲೀಸರು ಖಚಿತ ಮಾಹಿತಿ ಪಡೆದಿದ್ದರು.
ಅದರಂತೆ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಂತೆ ರಾಮನಗರ ಪಿಎಸ್ಐ ಕಿರಣ ಬಿ. ಪಾಟೀಲ್ ನೇತೃತ್ವದ ತಂಡ ದಾಳಿ ಮಾಡಿತ್ತು. ಈ ವೇಳೆ ಗೋವಾ ಮದ್ಯವನ್ನು ಅಕ್ರಮವಾಗಿ ದಾಸ್ತಾನು ಮಾಡಿರುವುದು ಪತ್ತೆಯಾಗಿದೆ.
ಅದರಲ್ಲಿ 750 ಎಂ ಎಲ್ ನ 1,800 ವಿಸ್ಕಿ ಬಾಟಲ್, 500 ಎಂಎಲ್ ನ 1,248 ಟಿನ್ ಬಿಯರ್, 750 ಎಂಎಲ್ ನ 24 ಬಾಟಲಿ ಸೇರಿ ಒಟ್ಟು 2,95,056 ರೂಪಾಯಿ ಮೌಲ್ಯದ ಗೋವಾದ ಮದ್ಯವನ್ನು ಜಫ್ತಿ ಮಾಡಲಾಗಿದೆ. ಆದರೆ, ಕಾರ್ಯಾಚರಣೆ ವೇಳೆ ಆರೋಪಿ ಪರಾರಿಯಾಗಿದ್ದಾನೆ.
ಕಾರ್ಯಾಚರಣೆಯಲ್ಲಿ ಎಎಸ್ಐ, ಆರ್. ಕೆ. ದೊಡ್ಡಮನಿ, ಸಿಬ್ಬಂದಿಗಳಾದ ತನೋಜ ಬೈಲೂರ, ರಾಜು ರಾಠೋಡ್, ಮಾಲತೇಶ ಮನ್ನಂಗಿ, ಸುರೇಂದ್ರ ನಾಯ್ಕ, ಪವನಕುಮಾರ ದೇಸಾಯಿ, ರಾಮಪ್ಪ ಪರಸಪ್ಪಗೋಳ, ಆದರ್ಶ ಮಾಳಗೆ, ಪ್ರದೀಪ ಅಂಡಿಗೇರ ಭಾಗವಹಿಸಿದ್ದರು.