ನವದೆಹಲಿ: ಕೇಂದ್ರದ ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಪುತ್ರ ಕಾರ್ತಿ ಚಿದಂಬರಂ ವಿದೇಶ ಪ್ರಯಾಣ ಬೆಳೆಸುವುದಿದ್ದರೆ ಹತ್ತು ಕೋಟಿ ಠೇವಣಿ ನೀಡಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಕಾರ್ತಿ, ಅಮೆರಿಕ, ಜರ್ಮನಿ ಹಾಗೂ ಸ್ಪೇನ್ ದೇಶಕ್ಕೆ ಈ ತಿಂಗಳಲ್ಲಿ ಪ್ರಯಾಣ ಬೆಳೆಸುವ ಸಲುವಾಗಿ ಸರ್ವೋಚ್ಛ ನ್ಯಾಯಾಲಯದಲ್ಲಿ ಮನವಿ ಸಲ್ಲಿಸಿದ್ದರು. ಟೆನ್ನಿಸ್ ಅಸೋಸಿಯೇಷನ್ ಸಭೆಯಲ್ಲಿ ಭಾಗಿಯಾಗಲು ತೆರಳುವುದಾಗಿ ಕಾರ್ತಿ, ಸುಪ್ರೀಂ ಕೋರ್ಟ್ನಲ್ಲಿ ಹೇಳಿದ್ದರು. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಹತ್ತು ಕೋಟಿ ಠೇವಣಿ ಇಡುವಂತೆ ಸೂಚಿಸಿದೆ.
ತಮ್ಮ ಕಕ್ಷಿದಾರ ಈಗಾಗಲೇ ಹತ್ತು ಕೋಟಿ ಠೇವಣಿ ನೀಡಿದ್ದಾರೆ ಎಂದು ಕಾರ್ತಿ ಪರ ವಕೀಲ ಹೇಳಿದಾಗ ಇನ್ನೂ ಹತ್ತು ಕೋಟಿ ನೀಡಲಿ, ನಿಮ್ಮ ಕಕ್ಷಿದಾರರಿಗೆ ಈ ಮೊತ್ತ ಹೆಚ್ಚುವರಿಯಲ್ಲ ಎಂದು ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಹೇಳಿದ್ದಾರೆ.
ಚಿದಂಬರಂ ಹಾಗೂ ಪುತ್ರ ಕಾರ್ತಿ ಇಬ್ಬರೂ ವಿದೇಶಿ ಬಂಡವಾಳ ಹೂಡಿಕೆಯಲ್ಲಿ ಕಳ್ಳಾಟ ಆಡಿದ ಆರೋಪ ಎದುರಿಸುತ್ತಿದ್ದು, ಇದೇ ಪ್ರಕರಣ ಸದ್ಯ ಸುಪ್ರೀಂನಲ್ಲಿ ವಿಚಾರಣೆಯಾಗುತ್ತಿದೆ. ಯುಪಿಎ ಕಾರ್ಯಾವಧಿಯಲ್ಲಿ ಈ ಅವ್ಯವಹಾರ ನಡೆದಿತ್ತು ಎನ್ನಲಾಗಿದೆ.