ಚಿಕ್ಕಬಳ್ಳಾಪುರ : ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಐತಿಹಾಸಿಕ ಪ್ರಸಿದ್ಧ ಗಡಿದಂ ವೆಂಕಟರಮಣ ಸ್ವಾಮಿ ದೇವಾಲಯವನ್ನು ಸರ್ಕಾರದ ಮಾರ್ಗ ಸೂಚಿಯಂತೆ ತೆರೆಯಲು ಸಕಲ ಸಿದ್ಧತೆ ಮಾಡಲಾಗುತ್ತಿದೆ.
ಸುಮಾರು 76 ದಿನಗಳ ಕಾಲ ಲಾಕ್‌ಡೌನ್‌ನಿಂದ ಮುಚ್ಚಿದ್ದ ದೇವಾಲಯಗಳನ್ನು ತೆರೆಯಲು ಕೇಂದ್ರ ಹಾಗೂ ರಾಜ್ಯ ಸರ್ಕಾರ ಅನುಮತಿ ನೀಡಿವೆ. ಬಾಗೇಪಲ್ಲಿ ತಾಲೂಕು ತಹಶೀಲ್ದಾರ್ ಹಾಗೂ ಗಡಿದಂ ವೆಂಕಟರಮಣ ಸ್ವಾಮಿ ದೇವಾಲಯ ಸಮಿತಿ ದೇವಸ್ಥಾನ ತೆರೆಯಲು ಬೇಕಾದ ಎಲ್ಲಾ ರೀತಿಯ ಸಿದ್ಧತೆಯನ್ನು ಕೈಗೊಂಡಿದೆ. ದೇವಾಲಯಕ್ಕೆ ಬರುವ ಭಕ್ತರು ಮಾಸ್ಕ್ ಧರಿಸಿರಬೇಕು. ಈಗಾಗಲೇ ಸ್ಯಾನಿಟೈಸರ್ ವ್ಯವಸ್ಥೆ ಕೂಡಾ ಮಾಡಲಾಗಿದೆ. ಅಲ್ಲದೆ ದೇವಾಲಯದಲ್ಲಿ ತೀರ್ಥ ಪ್ರಸಾದವಿರುವುದಿಲ್ಲ.
60 ವರ್ಷ ಮೇಲ್ಪಟ್ಟವರಿಗೆ ದೇವಾಲಯಕ್ಕೆ ಅವಕಾಶವಿರುವುದಿಲ್ಲ. ಬರುವ ಭಕ್ತರು ಸಾಮಾಜಿಕ ಅಂತರ ಕಾಯ್ದುಕೊಂಡು ವೆಂಕಟರಮಣ ಸ್ವಾಮಿ ದರ್ಶನ ಪಡೆಯಬೇಕು ಎಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ. ಸೋಮವಾರದಿಂದ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ದೇವಸ್ಥಾನ ತೆರೆಯಲು ಧಾರ್ಮಿಕ ಧತ್ತಿ ಇಲಾಖೆ ನಿರ್ಧರಿಸಿದ್ದು, ಸರ್ಕಾರದ ಮಾರ್ಗಸೂಚಿಗೆ ಅನುಗುಣವಾಗಿ ಸಿದ್ಧತೆ ನಡೆಸಿದೆ.