ಮಂಡ್ಯ: ಹೆಚ್.ಡಿ ಕುಮಾರಸ್ವಾಮಿ ಅವರ ಜೀವನ ಚರಿತ್ರೆ ತೆರೆದ ಪುಸ್ತಕ. ಏನ್ ಹೇಳಬೇಕು, ಏನ್ ಆಗಿದೆ ಅನ್ನೋದನ್ನು ವಿಧಾನಸಭೆಯಲ್ಲಿ ಸ್ಪಷ್ಟಪಡಿಸಿದ್ದಾರೆ ಎಂದು ಬಿಜೆಪಿಯಿಂದ ಕುಮಾರಸ್ವಾಮಿ ವಿರುದ್ಧ ವೈಯಕ್ತಿಕ ಟೀಕೆ ವಿಚಾರಕ್ಕೆ ಮಾಜಿ ಸಂಸದ ಎಲ್.ಆರ್. ಶಿವರಾಮೇಗೌಡ ತಿರುಗೇಟು ನೀಡಿದರು.
ಮಂಡ್ಯದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿ ನಾಯಕರ ಜೀವನ ಚರಿತ್ರೆಯನ್ನು ದೊಡ್ಡ ಸಿನಿಮಾ ತೆಗೆಯಬಹುದು. ಬಿಜೆಪಿಯವರು ಇನ್ನೊಬ್ಬರಿಗೆ ಉಪದೇಶ ಮಾಡುವ ಹಾಗೆ ಇಲ್ಲ. ಅವರ ಸರ್ಕಾರ ಇರುವುದರಿಂದ ಅವರ ವಾಸನೆ ಇನ್ನೂ ಬರ್ತಾ ಇಲ್ಲ ಎಂದು ವ್ಯಂಗ್ಯವಾಡಿದರು.
ಹಾನಗಲ್, ಸಿಂದಗಿಯಲ್ಲಿ ಜೆಡಿಎಸ್ ಗೆಲುವು:
ಹಾನಗಲ್ ಮತ್ತು ಸಿಂದಗಿಯಲ್ಲಿ ಜೆಡಿಎಸ್ ಗೆಲ್ಲುವ ಸೂಚನೆ ಜಾಸ್ತಿ ಇದೆ. ಇದಕ್ಕಾಗಿ ಈ ರೀತಿಯ ಟೀಕೆಯನ್ನು ಬಿಜೆಪಿ ಮಾಡುತ್ತಿದೆ. ಅಲ್ಲದೇ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ, ಬಿಜೆಪಿ ನಾಯಕರು ಅವರು ಮೂಟೆಗಟ್ಟಲೇ ಹಣ ತಂದು ಹಂಚುತ್ತಿದ್ದಾರೆ ಎಂದು ಹೇಳಿದ್ದಾರೆ. ಅವರು ಹೇಳಿದ ರೀತಿ ಅವರು ದುಡ್ಡು ಹಂಚುತ್ತಿದ್ದಾರೆ ಎಂದು ಗಂಭೀರವಾಗಿ ಆರೋಪಿಸಿದರು.
ಬಿಜೆಪಿಗೆ ವಾಮಮಾರ್ಗದಲ್ಲಿ ರಾಜಕೀಯ ಮಾಡಿ ಅಭ್ಯಾಸ:
ಬಿಜೆಪಿ ಅವರಿಗೆ ರಾಜಮಾರ್ಗದಲ್ಲಿ ರಾಜಕಾರಣ ಮಾಡಿ ಅನುಭವವಿಲ್ಲ. ಅವರಿಗೆ ವಾಮಮಾರ್ಗದಲ್ಲಿ ರಾಜಕೀಯ ಮಾಡಿ ಅಭ್ಯಾಸ. ಬೆಂಗಳೂರಿನಲ್ಲಿ ಒಬ್ಬರು ಹೇಳ್ತಾ ಇದ್ದರು. ನಾವು ದುಡ್ಡು ಕೊಟ್ಟು ಕೊಂಡುಕೊಳ್ಳುತ್ತೇವೆ ಎಂದು. ಇದು ಬಿಜೆಪಿಯ ಸಂಸ್ಕೃತಿ ಎಂದು ಟೀಕಿಸಿದರು.
ಆರ್ಎಸ್ಎಸ್ನಲ್ಲಿ ಎಲ್ಲರೂ ಕೆಟ್ಟವರು ಎಂದಿಲ್ಲ:
ಆರ್ಎಸ್ಎಸ್ ಮೂಲಕ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಇವರ ಬಂಡವಾಳ ಇಡೀ ರಾಷ್ಟ್ರಕ್ಕೆ ಗೊತ್ತು. ಆದ್ರೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದಲ್ಲಿ ಎಲ್ಲರೂ ಕೆಟ್ಟವರು ಅಂತ ಹೇಳಲ್ಲ. ಅಲ್ಲಿ ಹೆಚ್ಚಿನ ಜನ ಕಣ್ಣಿಗೆ ಕಾಣಲ್ಲ ಎಂದರು.
ಆರ್ಎಸ್ಎಸ್ನಲ್ಲಿ ಇರುವಂತವರು ಮಾಡುವ ಭ್ರಷ್ಟಚಾರ ಇನ್ನೆಲ್ಲಿಯೂ ಇಲ್ಲ:
ಮೊನ್ನೆ ಯಾರೋ ಒಬ್ಬರು ಶಾಸಕರು ಹೇಳಿದ್ದಾರೆ. ಆರ್ಎಸ್ಎಸ್ ನಲ್ಲಿ ಇರುವಂತವರು ಮಾಡುವ ಭ್ರಷ್ಟಚಾರ ಇನ್ನೆಲ್ಲಿಯೂ ಇಲ್ಲ ಎಂದು. ತುಮಕೂರಿನ ಬಿಜೆಪಿ ಮುಖಂಡ ಸುರೇಶ್ ಗೌಡ ಅದರ ಬಗ್ಗೆ ಮಾತನಾಡೋದನ್ನ ಸಾಮಾಜಿಕ ಜಾಲತಾಣದಲ್ಲಿ ನೋಡಿದ್ದೇನೆ. ನೀಲಿ ಚಿತ್ರ ನೋಡುವವರು, ಭ್ರಷ್ಟಾಚಾರ ಮಾಡುವವರು ಬಿಜೆಪಿಯಲ್ಲಿ ಇದ್ದಾರೆ ಎಂದು ಗುಡುಗಿದರು.
ಯಾವುದೇ ಕಚೇರಿಗೆ ಹೋದ್ರು ಭ್ರಷ್ಟಾಚಾರ ತಾಂಡವವಾಡುತ್ತಿದೆ :
ಇಂದು ಈ ದೇಶದಲ್ಲಿ ಹಣವಿಲ್ಲದೆ ಯಾವ ಕೆಲಸ ಆಗುತ್ತಿಲ್ಲ. ಭ್ರಷ್ಟಾಚಾರ ಮುಗಿಲು ಮುಟ್ಟಿದೆ. ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಯಾವುದೇ ಕಚೇರಿಗೆ ಹೋದರು ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂದು ಶಿವರಾಮೇಗೌಡ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.