ತುಮಕೂರು: ಜಿಂದಾಲ್ ಕಂಪನಿಗೆ ಸರ್ಕಾರ ಭೂಮಿ ನೀಡುವ ಕುರಿತಂತೆ ಸಾರ್ವಜನಿಕರಿಂದ ಕೇಳಿಬಂದಿರುವ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ಸಮಿತಿಯೊಂದನ್ನು ರಚನೆ ಮಾಡಲಾಗಿದೆ ಎಂದು ಡಿಸಿಎಂ ಜಿ.ಪರಮೇಶ್ವರ್ ತಿಳಿಸಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಈಗಾಗಲೇ ಸಂಪುಟದಲ್ಲಿ ಜಿಂದಾಲ್ ಕಂಪನಿಗೆ ಭೂಮಿ ಕೊಡುವ ಬಗ್ಗೆ ನಾವು ನಿರ್ಧಾರ ಮಾಡಿದ್ದೆವು. ನಂತರ ಸಾರ್ವಜನಿಕರು ಮತ್ತು ಬಿಜೆಪಿ ಪಕ್ಷದಲ್ಲಿ ಹಲವು ಪ್ರಶ್ನೆಗಳು ಹುಟ್ಟಿಕೊಂಡಿವೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾವು ಅವರ ಮಾತಿಗೆ ಬೆಲೆ ಕೊಟ್ಟು ಉತ್ತರ ಕೊಡಬೇಕೆಂಬ ಉದ್ದೇಶದಿಂದ ಸಮಿತಿಯೊಂದನ್ನು ರಚನೆ ಮಾಡಿದ್ದೇವೆ.
1965 ರಿಂದ ಇಲ್ಲಿವರೆಗೆ ಯಾರು, ಯಾವ ಸಂದರ್ಭದಲ್ಲಿ ಎಷ್ಟು ಭೂಮಿಯನ್ನು ಜಿಂದಾಲ್ ಕಂಪನಿಗೆ ಕೊಟ್ಟಿದ್ದಾರೆ. ಯಾವ ಸಂದರ್ಭದಲ್ಲಿ ಜಿಂದಾಲ್ ಕಂಪನಿಗೆ ಕೊಡಲಾಗಿತ್ತು ಎಂಬ ಮಾಹಿತಿಯನ್ನು ಸಾರ್ವಜನಿಕರಿಗೆ ನೀಡುವ ತೀರ್ಮಾನವನ್ನು ಮಾಡಲಾಗಿದೆ. ಇನ್ನೆರಡು ವಾರದಲ್ಲಿ ಸಮಿತಿಯು ವರದಿ ನೀಡಲಿದೆ ಎಂದು ಮಾಹಿತಿ ನೀಡಿದರು.
ತುಮಕೂರಿನಲ್ಲಿ ಈಜಿ ಮೈಂಡ್ ಎಂಬ ಸಂಸ್ಥೆಯು ಸಾರ್ವಜನಿಕರಿಗೆ ಹೆಚ್ಚಿನ ಬಡ್ಡಿ ನೀಡುವ ನೆಪದಲ್ಲಿ ಕೋಟ್ಯಂತರ ರೂಪಾಯಿ ವಂಚಿಸಿರುವ ವಿಚಾರಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ಪೊಲೀಸರಿಗೆ ಸೂಚನೆ ನೀಡಿದ್ದೇನೆ. ಕಾನೂನಿನಲ್ಲಿ ಇಂತಹ ಚಟುವಟಿಕೆಗಳಿಗೆ ಅವಕಾಶವಿಲ್ಲ. ಅಲ್ಲದೆ ಕಠಿಣವಾದ ಕಾನೂನುಗಳಿವೆ. ಜನರು ಕೂಡ ಸಾಕಷ್ಟು ಎಚ್ಚರಿಕೆಯಿಂದ ಇರಬೇಕು. ಬ್ಲೇಡ್ ಕಂಪನಿಗಳು ಎಂದು ಕರೆಯುವ ಇವುಗಳು ಹೊಸದೇನಲ್ಲ. ಕರ್ನಾಟಕದಲ್ಲಿ ಮಾತ್ರವಲ್ಲ ದೇಶದಲ್ಲಿ ಅಂತಹ ಹಲವು ಕಂಪನಿಗಳಿವೆ. ಈ ಕಂಪನಿಗಳಿಂದ ವಂಚನೆಗೆ ಒಳಗಾಗಿರುವವರು ಆತ್ಮಹತ್ಯೆಯಂತಹ ತಪ್ಪು ಹೆಜ್ಜೆ ಇಡಬಾರದು. ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಲಿದೆ ಎಂದು ಭರವಸೆ ನೀಡಿದರು.