ಕೊಪ್ಪಳ: ಸಾಮಾನ್ಯವಾಗಿ ಅಗ್ನಿಶಾಮಕ ದಳ ಅಂದ್ರೆ ಬೆಂಕಿ ನಂದಿಸುವುದು, ಅನೇಕ ಅವಘಡಗಳ ತುರ್ತು ಸಂದರ್ಭದ ಸೇವೆ ನೀಡುವುದು ಎಂಬುದು ನಮಗೆಲ್ಲ ಗೊತ್ತಿರುವ ವಿಚಾರ. ಆದರೆ, ಬೆಂಕಿ ನಂದಿಸುವುದಷ್ಟೇ ಅಲ್ಲದೆ ಈಗ ಅವರು ಸ್ಯಾನಿಟೈಸೇಷನ್ಗೂ ಸೈ ಎನ್ನುತ್ತಾ ಸೇವೆಯಲ್ಲಿ ಮತ್ತೊಂದನ್ನು ಅಳವಡಿಸಿಕೊಂಡಿದ್ದಾರೆ.
ಹೌದು, ಅಗ್ನಿ ಅವಘಡಗಳು ಸಂಂಭವಿಸಿದಾಗ, ತುರ್ತು ರಕ್ಷಣಾ ಕಾರ್ಯದಲ್ಲಿ ಅಗ್ನಿಶಾಮಕ ದಳ ಸಿಬ್ಬಂದಿ ತಮ್ಮ ಸೇವೆ ಸಲ್ಲಿಸುತ್ತಾರೆ. ಇಂತಹ ಅವಘಡಗಳು ಸಂಭವಿಸಿದಾಗ ತಮ್ಮ ವಾಹನದ ಸೈರನ್ ಹಾಕಿಕೊಂಡು ಸ್ಥಳಕ್ಕೆ ದೌಡಾಯಿಸುತ್ತಾರೆ. ಇಂತಹ ತುರ್ತು ಸೇವೆಗಳ ಜೊತೆಗೆ ಈಗ ಅಗ್ನಿಶಾಮಕ ದಳ ಕೊಪ್ಪಳ ಜಿಲ್ಲೆಯಲ್ಲಿ ಈಗ ಮತ್ತೊಂದು ಸಾರ್ವಜನಿಕ ಉಪಯೋಗಿ ಸೇವೆಯನ್ನು ಆರಂಭಿಸಿದ್ದಾರೆ. ಅದು ಸ್ಯಾನಿಟೈಸೇಷನ್ ಮಾಡುವ ಸೇವೆ.
ಕೊರೊನಾ ಸೋಂಕಿನ ಎರಡನೇ ಅಲೆ ಈಗ ವ್ಯಾಪಕವಾಗಿ ಹರಡುತ್ತಿದೆ. ಗ್ರಾಮೀಣ ಭಾಗದಲ್ಲಿಯೂ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು, ಪಾಸಿಟಿವ್ ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿ ಪತ್ತೆಯಾಗುತ್ತಿವೆ. ಸೋಂಕು ಹರಡಿ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿರುವ ಗ್ರಾಮೀಣ ಭಾಗದಲ್ಲಿ ಸ್ಯಾನಿಟೈಸೇಷನ್ ಮಾಡಲು ಅನುಕೂಲವಾಗುವಂತೆ ಅಗ್ನಿಶಾಮಕ ದಳ ಕೈ ಜೋಡಿಸುತ್ತಿದೆ.
ಸೋಂಕು ಹರಡಿರುವ ಗ್ರಾಮೀಣ ಪ್ರದೇಶಗಳಿಗೆ ಅಗ್ನಿಶಾಮಕ ದಳ ಸಿಬ್ಬಂದಿ ತೆರಳಿ ಸ್ಯಾನಿಟೈಸೇಷನ್ ಮಾಡಿ ಬರುತ್ತಿದ್ದಾರೆ. ಕೊಪ್ಪಳ ಜಿಲ್ಲೆಯಲ್ಲಿ ಈಗಾಗಲೇ ಕಾತರಕಿ - ಗುಡ್ಲಾನೂರು, ಹೊಸಳ್ಳಿ, ಮುನಿರಾಬಾದ್, ಕುಕನೂರು ಹಾಗೂ ಯಲಬುರ್ಗಾ ದಲ್ಲಿ ಸ್ಯಾನಿಟೈಸೇಷನ್ ಮಾಡಿ ಬಂದಿದ್ದಾರೆ. ಸೋಂಕು ಹರಡಿರುವ ಗ್ರಾಮಗಳ ವ್ಯಾಪ್ತಿಯ ಗ್ರಾಮ ಪಂಚಾಯ್ತಿಯು ಅಗ್ನಿಶಾಮಕ ದಳದ ಅಧಿಕಾರಿಗಳಿಗೆ ಕೋರಿಕೆ ಪತ್ರವನ್ನು ಸಲ್ಲಿಸಬೇಕು ಹಾಗೂ ಸೋಡಿಯಂ ಹೈಪೋಕ್ಲೊರೈಡ್ ಅಥವಾ ಸ್ಯಾನಿಟೈಸರ್ ನೀಡಿದರೆ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಸಿಬ್ಬಂದಿ ಬಂದು ಸ್ಯಾನಿಟೈಸೇಷನ್ ಮಾಡಲಾಗುತ್ತಿದೆ.
ಸಂಬಂಧಿಸಿದ ಗ್ರಾಮ ಪಂಚಾಯಿತಿ ನಮಗೆ ಸ್ಯಾನಿಟೈಸ್ ಮಾಡಿಕೊಡುವಂತೆ ಪತ್ರ ನೀಡಿದರೆ ಆದ್ಯತೆಯ ಮೇರೆಗೆ ನಾವು ವಾಹನ ಹಾಗೂ ಸಿಬ್ಬಂದಿಗಳನ್ನು ಕಳುಹಿಸಿ ಸ್ಯಾನಿಟೈಸ್ ಮಾಡಿಸುತ್ತೇವೆ. ಈಗಾಗಲೇ ನಾಲ್ಕಕ್ಕೂ ಹೆಚ್ಚು ಗ್ರಾಮ ಪಂಚಾಯ್ತಿಗಳು ಕೋರಿಕೆ ಪತ್ರ ಸಲ್ಲಿಸಿದ್ದವು. ಅವರ ಕೋರಿಕೆಯಂತೆ ನಾವು ಹೋಗಿ ಗ್ರಾಮಗಳಲ್ಲಿ ಸ್ಯಾನಿಟೈಸೇಷನ್ ಮಾಡಿಕೊಟ್ಟಿದ್ದೇವೆ ಎನ್ನುತ್ತಾರೆ ಅಗ್ನಿಶಾಮಕ, ತುರ್ತು ಸೇವೆಗಳ ಜಿಲ್ಲಾ ಅಧಿಕಾರಿ ಕೆ.ಎಂ. ಸಿದ್ದೇಶ ಅವರು.