ಚಾಮರಾಜನಗರ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೂರು ಕೃಷಿ ಕಾನೂನುಗಳನ್ನು ಹಿಂಪಡೆಯಬೇಕೆಂದು ಒತ್ತಾಯಿಸಿ ಇಂದು ತಮ್ಮ ಮನೆ, ಜಮೀನುಗಳಲ್ಲೇ ರೈತ ಸಂಘದ ಕಾರ್ಯಕರ್ತರು ಕಪ್ಪು ಬಾವುಟ ಹಾರಿಸಿದರು.
ಕೊರೊನಾ ಲಾಕ್ಡೌನ್ ಹಿನ್ನೆಲೆಯಲ್ಲಿ ರೈತ ಸಂಘ, ಹಸಿರು ಸೇನೆಯ ಕಾರ್ಯಕರ್ತರು ತಮ್ಮ ಮನೆ, ಜಮೀನುಗಳು, ಟ್ರ್ಯಾಕ್ಟರ್, ಕಾರುಗಳಿಗೆ ಕಪ್ಪು ಬಾವುಟ ಕಟ್ಟಿ ಕೃಷಿ ಚಟುವಟಿಕೆಗಳನ್ನು ನಡೆಸಿ ರೈತ ನಾಯಕರು ಕರೆ ನೀಡಿರುವ ಕರಾಳ ದಿನವನ್ನು ಆಚರಿಸಿದರು.
2020ರ ನವೆಂಬರ್ ಕೊನೆ ವಾರದಲ್ಲಿ ಪ್ರಾರಂಭವಾದ ರೈತರ ಮಹಾ ಹೋರಾಟ ಚಳಿ, ಗಾಳಿ, ಮಳೆ ಎಲ್ಲವನ್ನೂ ಎದುರಿಸಿ, ಈಗ ಬೇಸಿಗೆಯಲ್ಲೂ ಮುಂದುವರೆಯುತ್ತಿದೆ. ತಿದ್ದುಪಡಿ ಮಾಡಿರುವ ಮೂರು ಕೃಷಿ ಕಾನೂನುಗಳನ್ನು ಹಿಂತೆಗೆದುಕೊಳ್ಳಬೇಕು ಮತ್ತು ಎಂಎಸ್ಪಿ ಜಾರಿ ಮಾಡಬೇಕೆಂಬುವುದು ರೈತರ ಬೇಡಿಕೆಯಾಗಿದ್ದು, ಹೋರಾಟಕ್ಕೆ ಇಂದು ಅರ್ಧ ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ಕರಾಳ ದಿನ ಆಚರಿಸುತ್ತಿದ್ದಾರೆ.
ಕರಾಳ ದಿನದ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.